Mysore
18
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಮತ್ತೊಂದು ಥ್ರಿಲ್ಲರ್‍ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ; ‘FIR 6 to 6’ ಟ್ರೇಲರ್‍ ಬಿಡುಗಡೆ

ವಿಜಯ್‍ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್‍ ಕೊಂಡಾನ’, ‘ಜಾಗ್‍ 101’ ಮತ್ತು ‘ಗ್ರೇ ಗೇಮ್ಸ್’ ಹೀಗೆ ಮೂರೂ ಚಿತ್ರಗಳು ಥ್ರಿಲ್ಲರ್‍ ಚಿತ್ರಗಳಾಗಿದ್ದವು. ಈಗ ಅವರು ಇನ್ನೊಂದು ಥ್ರಿಲ್ಲರ್ ಚಿತ್ರವನ್ನು ಸದ್ದಿಲ್ಲದೆ ಮುಗಿಸಿದ್ದು, ಆ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.

ವಿಜಯ್‍ ರಾಘವೇಂದ್ರ ಹೊಸ ಚಿತ್ರಕ್ಕೆ ‘FIR 6 to 6’ ಎಂಬ ಹೆಸರನ್ನು ಇಡಲಾಗಿದ್ದು, ಈ ಹಿಂದೆ ‘ಪಟ್ಟಾಭಿಷೇಕ’ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯ ರಮೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆ.ವಿ. ರಮಣರಾಜ್ ಈ ಚಿತ್ರದ ನಿರ್ದೇಶಕರು.

‘FIR 6 to 6’ ಚಿತ್ರದ ಕುರಿತು ಮಾತನಾಡುವ ವಿಜಯ್‍ ರಾಘವೇಂದ್ರ, ‘ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಇಡೀ ಚಿತ್ರವನ್ನು ರಾತ್ರಿ ಹೊತ್ತು ಚಿತ್ರೀಕರಣ ಮಾಡಿದ್ದೇವೆ. ಹಲವು ರಾತ್ರಿಗಲ ಕಾಲ ಈ ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇವೆ. ಒಮ್ಮೊಮ್ಮೆ ಬೆಳಗಿನ‌ ಜಾವ ನಾಲ್ಕರವರೆಗೆ ಚಿತ್ರೀಕರಣ ಮಾಡಿದ್ದೇವೆ‌. ಈ ಚಿತ್ರದಲ್ಲಿ ಸಾಹಸ ದೃಶ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಥ್ರಿಲ್ಲರ್ ಮಂಜು ಅವರ ಜೊತೆಗೆ ಕೆಲಸ ಮಾಡುವುದು ತುಂಬಾ ಸುಲಭ. ಒಳ್ಳೆಯ ಅನುಭವ ಸಿಗುತ್ತದೆ’ ಎಂದರು.

ರಮಣರಾಜ್ ಈ ಹಿಂದೆ ತೆಲುಗಿನ ಜೆಡಿ ಚಕ್ರವರ್ತಿ ಅವರ ಜೊತೆ ಒಂದು ಚಿತ್ರ ಮಾಡಿದ್ದಾರೆ. ಆ ಚಿತ್ರವಿನ್ನೂ ಬಿಡುಗಡೆ ಆಗಿಲ್ಲ. ‘FIR 6 to 6’ ಅವರ ನಿರ್ದೇಶನದ ಎರಡನೇ ಚಿತ್ರ. ‘ಜೆಡಿ ಅವರ ಸಿನಿಮಾ ಮಾಡುವಾಗ ಹೊಳೆದಂಥ ಕಥೆ ಇದು. ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಎದುರಿಸುತ್ತಾನೆ ಅನ್ನೋದನ್ನು ಸಂಜೆ ಆರರಿಂದ ಬೆಳಗಿನ ಜಾವ ಆರರವರೆಗೆ ನಡೆಯುವ ಕಥೆಯ ಮೂಲಕ ಥ್ರಿಲ್ಲಿಂಗ್ ಆಗಿ ಹೇಳಲು ಪ್ರಯತ್ನಿಸಿದ್ದೇವೆ. ವಿಜಯ್‍ ರಾಘವೇಂದ್ರ ಅವರ ಜತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. 35 ರಾತ್ರಿಗಳಂದು ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಚೆನ್ನಾಗಿ ಬಂದಿದೆ’ ಎಂದು ಹೇಳಿದರು.

‘FIR 6 to 6’ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ ಜೊತೆಗೆ ಸಿರಿ ರಾಜ್‍, ನಾಗೇಂದ್ರ ಅರಸ್‍, ಬಲ ರಾಜವಾಡಿ, ಯಶ್‍ ಶೆಟ್ಟಿ, ಯಶ, ಶ್ವೇತಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಓಂಜಿ ಅವರ ಛಾಯಾಗ್ರಹಣ, ನಾಗೇಂದ್ರ ಅರಸ್‍ ಸಂಕಲನ, ಸತೀಶ್ ಬಾಬು ಹಾಗೂ ಎಂ.ಎಸ್. ತ್ಯಾಗರಾಜ್ ಸಂಗೀತವಿದೆ.

Tags:
error: Content is protected !!