ಕನ್ನಡ ಚಿತ್ರಗಳು ಬಿಡುಗಡೆಗೂ ಒಂದು ದಿನ ಮೊದಲೇ ಪ್ರೀಮಿಯರ್ ಕಾಣುವುದು, ಆ ವಿಶೇಷ ಪ್ರದರ್ಶನದಲ್ಲಿ ಚಿತ್ರರಂಗದ ಗಣ್ಯರು ನೋಡಿ ಚಿತ್ರದ ಬಗ್ಗೆ ಮಾತನಾಡುವುದು, ಇನ್ನೊಂದು ಕಡೆ ಅಭಿಮಾನಿಗಳಿಗೆಂದೇ ವಿಶೇಷ ಪ್ರೀಮಿಯರ್ ಶೋಗಳನ್ನು ಆಯೋಜಿಸುವುದು … ಇದ್ಯಾವುದೂ ಹೊಸದಲ್ಲ, ವಿಶೇಷವೂ ಅಲ್ಲ.
ಆದರೆ, ರಾಜ್ಯಕ್ಕಿಂತ ಮೊದಲ ಬೇರೆ ದೇಶಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶನ ಕಾಣುವುದು ಕಡಿಮೆ. ಇದುವರೆಗೂ ಬೆರಳಣಿಕೆಯಷ್ಟು ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಆಗುವುದಕ್ಕಿಂತ ಮೊದಲು ಅಮೇರಿಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿದೆ. ಈಗ ಈ ಸಾಲಿಗೆ ಅರುಣ್ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಹ ಸೇರಿದೆ.
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವು ಜುಲೈ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಹೌದು, ‘ವಿದ್ಯಾರ್ಥಿ ವಿದ್ಯಾರ್ಥಿನಿಯರ’ ಹವಾ ಸಾಗರದಾಚೆಗೂ ಹಬ್ಬಿದ್ದು, ಜುಲೈ 14ರಂದು ದುಬೈನಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಒಎಂಜಿ ಕಂಪೆನಿಯು ಗಲ್ಫ್ ರಾಷ್ಟ್ರಗಳಿಗೆ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದು, ಚಿತ್ರವನ್ನು ಮೊದಲು ದುಬೈನಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.
ಚಿತ್ರದ ಹೆಸರೇ ಹೇಳುವಂತೆ ಇದು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕುರುತಾದ ಚಿತ್ರ. ಕಾಲೇಜ್ ಹುಡುಗ-ಹುಡುಗಿಯರ ಹದಿಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಈ ಚಿತ್ರದಲ್ಲಿ ತೆರೆದಿಡಲಾಗಿದೆಯಂತೆ. ಹಾದಿ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಯತ್ನವೂ ಈ ಚಿತ್ರದಲ್ಲಿ ಮಾಡಲಾಗಿದೆಯಂತೆ. ಹಾಗಾಗಿ, ಇದು ವಿದ್ಯಾರ್ಥಿ ವಿದ್ಯಾರ್ಥಿನಿಯರು ನೋಡುವುದಕ್ಕಿಂತ, ಪೋಷಕರು ತಪ್ಪದೇ ನೋಡಲೇಬೇಕಾದ ಚಿತ್ರ ಎಂದು ಹೇಳುತ್ತಾರೆ ನಿರ್ದೇಶಕ ಅರುಣ್ ಅಮುಕ್ತ.
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’, Rapper ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೂರನೆಯ ಚಿತ್ರವಾದರೂ, ಬಿಡುಗಡೆ ಆಗುತ್ತಿರುವ ಮೊದಲ ಚಿತ್ರ. ಚಿತ್ರದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ‘ಕಾಕ್ರೋಚ್’ ಸುಧಿ ಮುಂತಾದವರು ನಟಿಸಿದ್ದಾರೆ.
ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ. ಶಿವಲಿಂಗೇಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಅರುಣ್ ಅಮುಕ್ತ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಜೇತ್ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.