ಬಾಲಿವುಡ್ ನಟ ವಿಕ್ಕಿ ಕೌಶಲ್ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ‘ಛಾವಾ’ ಚಿತ್ರದಲ್ಲಿ ಛತ್ರಪತಿ ಸಾಂಭಿಜಿ ಆಗಿ, ‘ಸ್‍ಯಾಮ್ ಬಹದ್ದೂರ್’ ಚಿತ್ರದಲ್ಲಿ ಸ್ಯಾಮ್ ಮಾಣಿಕ್‍ಷಾ ಆಗಿ, ಸರ್ದಾರ್ ‘ಉಧಮ್’ ಚಿತ್ರದಲ್ಲಿ ಉಧಮ್ ಸಿಂಗ್ ಆಗಿ ಹಲವು ಅವತಾರಗಳನ್ನು ಎತ್ತುತ್ತಾ ಬಂದಿದ್ದಾರೆ.
ಇದೀಗ ವಿಕ್ಕಿ, ಇನ್ನೊಂದು ‘ಮಹವತಾರ’ವನ್ನು ಎತ್ತುತ್ತಿದ್ದಾರೆ. ಈ ಬಾರಿ ಅವರು ‘ಮಹಾವತಾರ್’ ಎನ್ನುವ ಚಿತ್ರದಲ್ಲಿ ಪರಶುರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮ್ಯಾಡಾಕ್ ಫಿಲಂಸ್ ಸಂಸ್ಥೆಯಡಿ ದಿನೇಶ್ ವಿಜನ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವು ಅಧಿಕೃತವಾಗಿ ಘೋಷಣೆಯಾಗಿದೆ.
‘ಮಹಾವತಾರ್’ ಚಿತ್ರದ ಕುರಿತು ಮಾತನಾಡಿರುವ ವಿಕ್ಕಿ ಕೌಶಲ್, ‘ದಿನೇಶ್ ವಿಜನ್ ಕೆಲವು ದಿನಗಳ ಹಿಂದೆ ‘ಮಹಾವತಾರ್’ ಚಿತ್ರದ ಕಥೆಯೊಂದಿಗೆ ಬಂದರು. ಕಥೆ ಕೇಳಿ ಇಲ್ಲ ಎನ್ನುವುದಕ್ಕೆ ಸಾಧ್ಯವಾಗಲೇ ಇಲ್ಲ. ಎರಡನೇ ಯೋಚನೆ ಮಾಡದೆ, ಈ ಚಿತ್ರದ ಭಾಗವಾಗುವುದಕ್ಕೆ ಮುಂದಾದೆ. ಈ ಚಿತ್ರದ ಕೆಲಸಗಳು ಮುಂದಿನ ವರ್ಷದ ಜನವರಿಯಲ್ಲಿ ಪ್ರಾರಂಭವಾಗಲಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರ ಮುಗಿದ ನಂತರ ಮುಂದಿನ ನವೆಂಬರ್‍ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. 2026ರ ಡಿಸೆಂಬರ್ ವೇಳೆಗೆ ಚಿತ್‍ರ ಬಿಡುಗಡೆಯಾಗಲಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ಮಹಾವತಾರ್’ ಚಿತ್ರವನನು ಅಮರ್ ಕೌಶಿಕ್ ನಿರ್ದೇಶನ ಮಾಡುತ್ತಿದ್ದಾರೆ.





