Mysore
19
scattered clouds
Light
Dark

ಜೂನ್‍ನಲ್ಲಿ ಚಿತ್ರ ಬಿಡುಗಡೆ ಮಾಡಿದ್ದೇ ತಪ್ಪಾಯ್ತು: ವಸಿಷ್ಠ ಬೇಸರದ ನುಡಿ

ವಸಿಷ್ಠ ಸಿಂಹ ಅಭಿನಯದ ‘ಲವ್‍ ಲಿ’ ಚಿತ್ರವು ಜೂನ್‍ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ, ಇದೀಗ 25 ದಿನಗಳನ್ನು ಪೂರೈಸಿದೆ. ಚಿತ್ರವೇನೋ 25 ದಿನಗಳನ್ನು ಪೂರೈಸಿದ್ದರೂ, ಜನ ಮಾತ್ರ ದೊಡ್ಡ ಮಟ್ಟದಲ್ಲಿ ಚಿತ್ರ ನೋಡುವುದಕ್ಕೆ ಬರುತ್ತಿಲ್ಲ ಎಂಬ ಬೇಸರ ಚಿತ್ರತಂಡದ್ದು.

ಚಿತ್ರ 25 ದಿನ ಓಡಿದ ಸಂತಸದಲ್ಲಿ ಚಿತ್ರತಂಡದವರು ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ಮತ್ತು ತಂತ್ರಜ್ಞರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎದುರಿಸಿದ ಸಾಕಷ್ಟು ಸಮಸ್ಯೆಗಳನ್ನು ಚಿತ್ರತಂಡದವರು ಹೇಳಿಕೊಂಡರು.

ಜೂನ್‍ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಿದ್ದೇ ತಪ್ಪಾಯ್ತು ಎಂದರು ವಸಿಷ್ಠ ಸಿಂಹ. ‘ಜೂನ್ ತಿಂಗಳು ನಮಗೆ ಮಾರಕವಾಯಿತು. ನಮ್ಮ ಚಿತ್ರ ಬಿಡುಗಡೆ ಸಮಯದಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಾಯಿತು. ಆ ಸಮಸ್ಯೆಗಳ ನಡುವೆ ನಮ್ಮ ಚಿತ್ರ ತೆರೆ ಕಂಡಿತ್ತು. ಚಿತ್ರ ನೋಡಿದವರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ‌. ಆದರೆ, ನಾವು ನಿರೀಕ್ಷಿಸಿದಷ್ಟು ಜನ ಬರುತ್ತಿಲ್ಲ ಎಂಬ ಬೇಸರ ಇದ್ದೇ ಇದೆ. ಈಗಾಗಲೇ ಚಿತ್ರ ನೋಡಿರುವವರಿಗೆ ಧನ್ಯವಾದ. ನೋಡದೇ ಇರುವವರು ಈಗಲೇ ನೋಡಿ’ ಎಂದು ಮನವಿ ಮಾಡಿದರು.

ನಿರ್ದೇಶಕ ಚೇತನ್‍ ಕೇಶವ್‍ಗೆ ಇದು ಮೊದಲ ಚಿತ್ರ. ಅವರುಜ ಚಿತ್ರಮಂದಿರದತ್ತ ಬರುತ್ತಿಲ್ಲ ಎಂದು ಬೇಸರದಿಂದಲೇ ಹೇಳಿಕೊಂಡರು. ‘ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರ ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಡೇರಿದೆ‌. ಜನ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡುತ್ತಿದ್ದಾರೆ. ಆದರೆ, ನಿರೀಕ್ಷಿಸಿದಷ್ಟು ಜನರು ಚಿತ್ರ ನೋಡಿಲ್ಲ ಎಂಬ ಬೇಸರವಿದೆ. ನಮ್ಮ ಚಿತ್ರವನ್ನು ಹೆಚ್ಚಿನ ಜನರು ನೋಡಿ’ ಎಂದರು.

ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಮಾತನಾಡಿ, ‘ನಮ್ಮ ಜನ ಬೇರೆ ಭಾಷೆಗಳ ಚಿತ್ರಗಳಿಗೆ ನೀಡುವ ಪ್ರೋತ್ಸಾಹವನ್ನು ನಮ್ಮ ಕನ್ನಡ ಚಿತ್ರಗಳಿಗೆ ನೀಡುವುದಿಲ್ಲ ಎಂಬ ಬೇಸರ ಇದೆ. ದಯಮಾಡಿ ಕರ್ನಾಟಕದ ಜನರು ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ಒಬ್ಬ ನಿರ್ಮಾಪಕ ಗೆದ್ದರೆ, ಅದರಿಂದ ಬಂದ ಹಣವನ್ನು ಮತ್ತೊಂದು ಚಿತ್ರಕ್ಕೆ ಹಾಕುತ್ತಾನೆ. ಅದರಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ’ ಎಂದರು.

‘ಲವ್‍ ಲೀ’ ಚಿತ್ರವನ್ನು ಅಭುವನಾಸ್ ಕ್ರೀಯೆಷನ್ಸ್ ಬ್ಯಾನರ್ ನಡಿ ರವೀಂದ್ರ ಕುಮಾರ್ ನಿರ್ಮಾಣ ಮಾಡಿದ್ದಾರೆ. ವಸಿಷ್ಠ ಸಿಂಗಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ‍ನಟಿಸಿದ್ದು, ಮಿಕ್ಕಂತೆ ದತ್ತಣ್ಣ, ಕಾಕ್ರೋಜ್ ಸುಧೀ, ಶೇಖರ್, ವರ್ಧನ್, ಬೇಬಿ ವಂಶಿಕಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನೂಪ್‍ ಸೀಳಿನ್‍ ಸಂಗೀತವಿದೆ.