ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ಎರಡು ತಿಂಗಳುಗಳಿಂದ ಭರದಿಂದ ಸಾಗಿದೆ. ಹೀಗಿರುವಾಗಲೇ, ಚಿತ್ರವು ಅಂದುಕೊಂಡಂತೆ ಮುಂದಿನ ವರ್ಷ ಏಪ್ರಿಲ್ 10ರಂದು ಬಿಡುಗಡೆ ಆಗುವುದಿಲ್ಲ ಎಂದು ಸ್ವತಃ ನಟ ಯಶ್ ಸ್ಪಷ್ಟಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ‘ಟಾಕ್ಸಿಕ್’ ಚಿತ್ರವು ಘೋಷಣೆಯಾಗಿತ್ತು. ಘೋಷಣೆಯ ದಿನವೇ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಅದರ ಪ್ರಕಾರ, ಚಿತ್ರವು 2025ರ ಏಪ್ರಿಲ್ 10ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರ ಶುರುವಾಗಿದ್ದೇ ಎರಡು ತಿಂಗಳ ಹಿಂದಾದ್ದರಿಂದ, ಅಂದುಕೊಂಡ ಸಮಯದಲ್ಲಿ ಚಿತ್ರವು ಬಿಡುಗಡೆಯಾಗುವುದು ಸಂಶಯ ಎಂಬ ಮಾತು ಕೇಳಿಬಂದಿತ್ತು. ಆದರೆ, ಚಿತ್ರತಂಡ ಈ ಕುರಿತು ಯಾವುದೇ ಸ್ಪಷ್ಟನೆ ಬಂದಿರಲಿಲ್ಲ. ಆದರೆ, ಸಂದರ್ಶನವೊಂದರಲ್ಲಿ ಮಾತನಾಡಿರುವ ಯಶ್, ಚಿತ್ರವು ಏಪ್ರಿಲ್ 10ಕ್ಕೆ ಬಿಡುಗಡೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು, ಚಿತ್ರಕ್ಕೆ ‘ಟಾಕ್ಸಿಕ್ – A Fairy Tale For Grown-Ups’ ಎಂಬ ಶೀರ್ಷಿಕೆ ಕೊಟ್ಟಿದ್ದು ತಾನೇ ಎಂದು ಹೇಳಿಕೊಂಡಿದ್ದಾರೆ. ‘ನಮ್ಮಲ್ಲಿ ಮಕ್ಕಳಿಗೆ ಸಾಕಷ್ಟು ಕಾಲ್ಪನಿಕ ಕಥೆಗಳಿವೆ. ಆದರೆ, ದೊಡ್ಡವರಿಗೆ ಅಂತಹ ಕಥೆಗಳಿಲ್ಲ. ಯಾಕೆ, ದೊಡ್ಡವರಿಗೆ ಅಂಥದ್ದೊಂದು ಕಥೆ ಕೊಡಬಾರದು ಎಂಬ ನಿಟ್ಟಿನಲ್ಲಿ ಈ ಚಿತ್ರ ಮಾಡುತ್ತಿದ್ದೇವೆ. ಈ ಶೀರ್ಷಿಕೆ ಮತ್ತು ಟ್ಯಾಗ್‍ಲೈನ್ ಎರಡೂ ಕೊಟ್ಟಿದ್ದು ನಾನೇ. ಇಂದಿನ ಯುಗದಲ್ಲಿ ನಾವು ಸಾಕಷ್ಟು ಗೊಂದಲಗಳ ಮಧ್ಯೆ ಹೋರಾಟ ಮಾಡುತ್ತಿರುತ್ತೇವೆ ಮತ್ತು ‘ಟಾಕ್ಸಿಕ್’ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಇಂದು ನಾವು ಇದೇ ಟಾಕ್ಸಿಕ್ (ವಿಷಕಾರಿ) ವಾತಾವರಣದಲ್ಲಿ ಬದುಕುತ್ತಿರುವುದರಿಂಧ, ಚಿತ್ರಕ್ಕೆ ಅದೇ ಶೀರ್ಷಿಕೆ ಸೂಕ್ತ ಎಂದನಿಸಿತು’ ಎಂದಿದ್ದಾರೆ.
ಯಶ್ ಇದುವರೆಗೂ ಮಾಡಿಕೊಂಡ ಚಿತ್ರಗಳು ಬೇರೆ, ನಿರ್ದೇಶಕಿ ಗೀತು ಮೋಹನ್ ದಾಸ್ ಪ್ರಪಂಚ ಬೇರೆ. ಎರಡು ಪ್ರಪಂಚಗಳು ಒಟ್ಟಿಗೆ ಸೇರಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಯಶ್, ‘ಗೀತು ಅವರ ಚಿತ್ರಗಳು ಬೇರೆ ಇರಬಹುದು. ಆದರೆ, ಅವರಿಗೆ ಮಾಸ್ ಪ್ರೇಕ್ಷಕರ ನಾಡಿಮಿಡಿತ ಬಹಳ ಚೆನ್ನಾಗಿ ಗೊತ್ತಿದೆ. ಇನ್ನು, ನಾನು ಯಾವಾಗಲೂ ಪ್ರೇಕ್ಷಕರನ್ನು ಮನರಂಜಿಸಬೇಕು ಎಂದು ಆಸೆಪಡುವವನು. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಎಷ್ಟೋ ಜನ ಕೇಳಿದ್ದಾರೆ. ಆದರೆ, ಒಂದೊಳ್ಳೆಯ ಮಾಸ್ ಕಥೆಯೊಂದಿಗೆ ಗೀತು ಬಂದಿದ್ದರು. ಇದೊಂದು ಮೆಗಾ ಮನರಂಜನಾತ್ಮಕ ಚಿತ್ರವಾಗುತ್ತದೆ ಎಂಬ ಕಾರಣಕ್ಕೆ ನಾನು ಅವರ ಜೊತೆಗೆ ಕೈ ಜೋಡಿಸಿದೆ’ ಎಂದು ಹೇಳಿದ್ದಾರೆ.
‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ.