ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 3’ ಚಿತ್ರವು 2025ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರದ ಸುದ್ದಿಯೇ ಇಲ್ಲ. ಈಗ ಅವರ ‘ಥಗ್ ಲೈಫ್’ ಎಂಬ ಇನ್ನೊಂದು ಚಿತ್ರ ಜೂನ್ 05ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಅದಕ್ಕೂ ಮೊದಲು ಈ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ಮೂರು ದಶಕದ ನಂತರ ಕಮಲ್ ಹಾಸನ್ – ಮಣಿರತ್ನಂ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಥಗ್ ಲೈಫ್’. ಈ ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಸಿಂಬು, ಮಣಿರತ್ನಂ, ಅಭಿರಾಮಿ, ಅಶೋಕ್ ಸೆಲ್ವನ್, ತ್ರಿಷಾ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.
‘ಥಗ್ ಲೈಫ್’ ಚಿತ್ರದ ‘ಜಿಂಗುಚ್ಚಾ …’ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಕಮಲ್, ಸಿಂಬು ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಮದುವೆ ಸಮಾರಂಭದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷ ಅಂದರೆ ಈ ಹಾಡಿಗೆ ಸ್ವತಃ ಕಮಲ್ ಹಾಸನ್ ಸಾಹಿತ್ಯ ಬರೆದಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
ರಾಜ್ ಕಮಲ್ ಫಿಲ್ಮ್ಸ್ ಇಂಟರ್‍ನ್ಯಾಷನಲ್, ಆರ್. ಮಹೇಂದ್ರನ್, ಮದ್ರಾಸ್ ಟಾಕೀಸ್ ಮತ್ತು ಶಿವ ಅನಂತ್ ನಿರ್ಮಾಣದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕಮಲ್ ಹಾಸನ್, ಸಿಲಂಬರಸನ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ, ನಾಸರ್ ಮುಂತಾದವರು ನಟಿಸಿರುವ ಈ ಚಿತ್ರದ ಕಥೆ-ಚಿತ್ರಕಥೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ಮಣಿರತ್ನಂ ನಿರ್ದೇಶನ ಮಾಡಿದ್ದಾರೆ.





