Mysore
16
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಈ ಬಾರಿ ‘ಬಿಗ್‍ ಬಾಸ್‍’ಗೆ ಸುದೀಪ್‍ ಬದಲು ಬೇರೆಯವರ ನಿರೂಪಣೆ?

ಆಗಸ್ಟ್ ತಿಂಗಳು ಬಂತಂದೆರೆ ‘ಬಿಗ್‍ ಬಾಸ್‍’ ಕುರಿತು ಚರ್ಚೆ ಶುರುವಾಗುತ್ತದೆ. ಅಕ್ಟೋಬರ್‍ನಲ್ಲಿ ಶುರುವಾಗುವ ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸಬಹುದು, ಏನೆಲ್ಲಾ ಆಗಬಹುದು ಎಂಬ ವಿಷಯಗಳು ಎರಡು ತಿಂಗಳ ಮೊದಲೇ ಶುರುವಾಗುತ್ತದೆ. ಈ ಬಾರಿಯೂ ಚರ್ಚೆ ಶುರುವಾಗಿದ್ದು, ಆದರೆ ಕಾರ್ಯಕ್ರಮದಲ್ಲಿ ಯಾರು ಭಾಗವಹಿಸಬಹುದು ಎಂಬುದಕ್ಕಿಂತ, ಯಾರು ನಡೆಸಿಕೊಡಬಹುದು ಎಂಬ ಬಿಸಿಬಿಸಿ ಚರ್ಚೆ ಆಗುತ್ತಿದೆ.

ಕಲರ್ಸ್ ಕನ್ನಡದಲ್ಲಿ ನಡೆಯುವ ‘ಬಿಗ್‍ ಬಾಸ್‍’ ಕಾರ್ಯಕ್ರಮದಿಂದ ನಿರೂಪಕ ಸುದೀಪ್‍ ಹೊರನಡೆಯುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಕಿರುತೆರೆಯ ವಲಯದಲ್ಲಿ ಕೇಳಿಬರುತ್ತಿದೆ. ಸುದೀಪ್‍ ಬದಲು ಬೇರೆಯವರು ನಡೆಸಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು ಕನ್ನಡದಲ್ಲಿ ಮೊದಲಿನಿಂದಲೂ ನಿರೂಪಿಸಿಕೊಂಡು ಬಂದವರು ಸುದೀಪ್‍. ಸತತವಾಗಿ 10 ಸೀಸನ್‍ಗಳ ಕಾಲ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅವರು ಹೊತ್ತಿದ್ದು, ‘ಬಿಗ್‍ ಬಾಸ್‍’ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಿರುವಾಗ, ಅವರು ಬದಲಾಗುತ್ತಿರುವುದೇಕೆ?

ಹಿಂದಿ ‘ಬಿಗ್ ಬಾಸ್‍’ ಕಾರ್ಯಕ್ರಮವನ್ನು ಹಲವು ವರ್ಷಗಳ ಕಾಲ ಸಲ್ಮಾನ್‍ ಖಾನ್‍ ನಡೆಸಿಕೊಟ್ಟಿದ್ದರು. ಈ ಬಾರಿ ಅವರ ಬೇಡಿಕೆ ಮತ್ತು ಸಂಭಾವನೆ ಹೆಚ್ಚಾಗಿದ್ದರಿಂದ, ಅವರನ್ನು ಬದಿಗಿಟ್ಟು ಆ ಜವಾಬ್ದಾರಿಯನ್ನು ಹಿರಿಯ ನಟ ಅನಿಲ್‍ ಕಪೂರ್‍ ಅವರಿಗೆ ನೀಡಲಾಗಿದೆ. ಈ ಹಿಂದೆ ಸಹ ‘ಬಿಗ್ ಬಾಸ್‍’ನಲ್ಲಿ ನಿರೂಪಕರು ಬದಲಾಗಿದ್ದಿದೆ. ಇದುವರೆಗೂ 17 ಸೀಸನ್‍ಗಳಾಗಿದ್ದು, ಸಲ್ಮಾನ್‍ ಖಾನ್‍, ಸಂಜಯ್ ದತ್‍, ಅಮಿತಾಭ್‍ ಬಚ್ಚನ್‍, ಶಿಲ್ಪಾ ಶೆಟ್ಟಿ ಮುಂತಾದವರು ನಡೆಸಿಕೊಟ್ಟಿದ್ದಾರೆ. ತೆಲುಗು ಮತ್ತು ಮರಾಠಿಯಲ್ಲೂ ಈ ಬದಲಾವಣೆಗಳಾಗಿವೆ. ಕನ್ನಡದಲ್ಲೂ ಯಾಕೆ ಅಂಥದ್ದೊಂದು ಪ್ರಯತ್ನ ಮಾಡಬಾರದು ಎಂದು ಯೋಚನೆ ನಡೆದಿದೆಯಂತೆ.

ಈ ವಿಷಯವಾಗಿ ಸುದೀಪ್‍ ಅಥವಾ ಚಾನಲ್‍ ಕಡೆಯಿಂದ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದರ ನಡುವೆಯೇ ಸುದೀಪ್ ಬದಲು ಯಾರು ಈ ಕಾರ್ಯಕ್ರಮವನ್ನು ನಡೆಸಿಕೊಡಬಹುದು ಎಂಬ ಚರ್ಚೆ ಜೋರಾಗಿ ಶುರುವಾಗಿದೆ. ಪ್ರಮುಖವಾಗಿ, ರಮೇಶ್ ‍ಅರವಿಂದ್ ಮತ್ತು ರಿಷಭ್‍ ಶೆಟ್ಟಿ ಹೆಸರುಗಳು ಕೇಳಿಬರುತ್ತಿವೆ. ರಮೇಶ್‍ ಅರವಿಂದ್‍ ಅವರ ಹೆಸರು ಓಕೆ. ಆದರೆ, ‘ಕಾಂತಾರ – ಚಾಪ್ಟರ್ 1’ ಚಿತ್ರವನ್ನು ಬಿಟ್ಟು ರಿಷಭ್ ಬರುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಇದರ ಜೊತೆಗೆ ಗಣೇಶ್‍ ಅವರ ಹೆಸರು ಸಹ ಪ್ರಮುಖವಾಗಿ ಕೇಳಿಬರುತ್ತಿದೆ.

ನಿಜಕ್ಕೂ ಇವರಲ್ಲಿ ಯಾರಾದರೂ ಒಬ್ಬರು ನಡೆಸಿಕೊಡುತ್ತಾರಾ? ಅಥವಾ ಸುದೀಪ್‍ ಅವರೇ ಈ ಕಾರ್ಯಕ್ರಮವನ್ನು ಮುಂದುವರೆಸುತ್ತಾರಾ? ಎಂಬುದುನ್ನು ಇನ್ನಷ್ಟೇ ಕಾದು ನೋಡಬೇಕಿದೆ.

Tags:
error: Content is protected !!