Mysore
21
overcast clouds
Light
Dark

ಈ ತರಹದ ಘಟನೆ ಯಾವ ಕಲಾವಿದರಿಗೂ ಆಗಬಾರದು: ದರ್ಶನ್‍ ಕುರಿತು ಸುದೀಪ್‍

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ನಟ ದರ್ಶನ್‍ ಅವರ ಕುರಿತು ಸುದೀಪ್‍ ಕೆಲವು ತಿಂಗಳಗಳ ಹಿಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ದರ್ಶನ್‍ ಅವರನ್ನು ಚಿತ್ರರಂಗದಿಂದ ಬ್ಯಾನ್‍ ಮಾಡಬೇಕು ಎನ್ನುವುದಕ್ಕಿಂತ ನೊಂದಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದರು.

ಈಗ ಈ ವಿಷಯವಾಗಿ ಸುದೀಪ್‍ ಇನ್ನಷ್ಟು ಮಾತನಾಡಿದ್ದಾರೆ. ಶನಿವಾರ ಬೆಳಿಗ್ಗೆ ತಮ್ಮ ಹುಟ್ಟುಹಬ್ಬದ ಕುರಿತು ಮಾಹಿತಿ ನೀಡುವ ಸಲುವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸುದೀಪ್‍, ತಮ್ಮ ಹಾಗೂ ದರ್ಶನ್‍ ಸಂಬಂಧದ ಕುರಿತು ಇನ್ನಷ್ಟು ಹೇಳಿದ್ದಾರೆ.

ತಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಹೇಳಿರುವ ಸುದೀಪ್, ‘ನಾನು ದರ್ಶನ್‍ ವಿಚಾರವಾಗಿ ಏನು ಹೇಳಬೇಕಿತ್ತೋ ಅವೆಲ್ಲವನ್ನೂ ಈ ಹಿಂದೆಯೇ ಹೇಳಾಗಿದೆ. ದರ್ಶನ್ ಅವರಿಗೆ ರಾಜ್ಯಾದ್ಯ ಉದ್ಧಗಲಕ್ಕೂ ಅಭಿಮಾನಿಗಳು ಇದ್ದಾರೆ. ಅವರಿಗೆ ಕುಟುಂಬ ಇದೆ. ನಾನು ಮಾತನಾಡುವುದರಿಂದ ಅವರಿಗೆ ನೋವಾಗುವುದು ಬೇಡ. ಈ ದೇಶದಲ್ಲಿ ಇದೀವಿ ಅಂದರೆ ಕಾನೂನಿನ ಮೇಲೆ ನಂಬಿಕೆ ಇರಬೇಕು. ನನಗೆ ಕಾನೂನು, ಸರ್ಕಾರದ ಮೇಲೆ ನಂಬಿಕೆಯಿದೆ. ಆಗಬೇಕಾಗಿರೋದು ಆಗಿಯೇ ಆಗುತ್ತದೆ’ ಎಂದು ಸುದೀಪ್‍ ಹೇಳಿದರು.

ದರ್ಶನ್‍ ಅವರನ್ನು ಭೇಟಿಯಾಗುವುದಕ್ಕೆ ಜೈಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅವರ ಜೊತೆಗೆ ಮಾತನಾಡಬೇಕಿದ್ದರೆ ಆಗಲೇ ಮಾತನಾಡಿರುತ್ತಿದ್ದೆ. ಕೆಲವರಿಂದ ನಾವು ಯಾಕೆ ಅಂತರ ಕಾಪಾಡಿಕೊಳ್ಳುತ್ತೇವೆ ಎಂದರೆ, ನಾವು ಸರಿ ಇಲ್ಲಅಥವಾ ಅವರು ಸರಿ ಇಲ್ಲ ಎಂದರ್ಥವಲ್ಲ. ನಾವಿಬ್ಬರೂ ಒಟ್ಟಿಗೆ ಸರಿ ಇಲ್ಲ ಎಂದರ್ಥ. ಸೂರ್ಯ ಬೆಳಿಗ್ಗೆ ಬಂದರೇನೇ ಒಳ್ಳೆಯದು, ಚಂದ್ರ ರಾತ್ರಿ ಬಂದರಷ್ಟೇ ಒಳ್ಳೆಯದು. ಎರಡೂ ಒಟ್ಟಿಗೆ ಸೇರಿದರೆ ಸಮಸ್ಯೆ ಆಗುತ್ತದೆ. ನಾವಿಬ್ಬರೂ ವಿಭಿನ್ನವಾದ ವ್ಯಕ್ತಿಗಳು. ಹಾಗಂತ ಸಹಬಾಳ್ವೆ ನಡೆಸುವುದಕ್ಕೆ ಸಾಧ‍್ಯವಿಲ್ಲವಾ? ನಾಟಕೀಯವಾಗಿ ಇರೋಕೆ ನನಗೆ ಬರುವುದಿಲ್ಲ. ಯಾರೋ ಹೇಳುತ್ತಾರೆ ಎಂದು ನನಗೆ ಸಂಬಂಧ ಬೆಸೆಯೋಕೆ ಇಷ್ಟವಿಲ್ಲ. ಅದು ಹೃದಯದಿಂದ ಬಂದರೆ, ಯಾರೇನಂದುಕೊಂಡರೂ ನಾನು ಹೋಗುತ್ತೀನಿ’ ಎಂದರು.

ಈ ವಿಷಯವಾಗಿ ಇನ್ನಷ್ಟು ಮಾತನಾಡಿದಾಗ, ‘ದರ್ಶನ್‍ ಅವರಿಗೆ ಅವಮಾನವಾದಾಗ, ಎಲ್ಲರೂ ಟ್ವೀಟ್ ಮಾಡಿ ಖಂಡಿಸಿದಾಗ, ನಾನು ಆ ಬಗ್ಗೆ ದೊಡ್ಡ ಪತ್ರವೇ ಬರೆದಿದ್ದೆ. ಅದನ್ನು ಯಾರನ್ನೋ ಮೆಚ್ಚಿಸುವುದಕ್ಕೆ ಮಾಡಿದ್ದಲ್ಲ. ನನ್ನ ಮನಸ್ಸಿಗೆ ಬಂತು. ಈ ತರಹದ ಘಟನೆ ಯಾವ ಕಲಾವಿದರಿಗೂ ಆಗಬಾರದು. ಎಷ್ಟೇ ಕೋಪವಿದ್ದರೂ ಆ ತರಹದ ಘಟನೆ ನಡೆಯಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಈ ತರಹದ ಘಟನೆಗಳಿಂದ ನಾಳೆ ಪಬ್ಲಿಕ್‍ನಲ್ಲಿ ಯಾರೂ ನಿಲ್ಲುವುದಕ್ಕೆ ಹೆದರಬಾರದು’ ಎಂದರು.

ಇನ್ನು, ನಾನು ಅವರ ಜೊತೆಗೆ ಇದ್ದಿದ್ದರೆ ಅವರನ್ನು ತಿದ್ದುತ್ತಿದ್ದೆ ಎಂಬುದೆಲ್ಲಾ ಸುಳ‍್ಳು ಎಂದ ಸುದೀಪ್, ‘ಒಬ್ಬ ವ್ಯಕ್ತಿ ಸಮಾಜದಲ್ಲಿ ಅಷ್ಟು ದೊಡ್ಡದಾಗಿ ಬೆಳೆದಿದ್ದಾರೆ ಎಂದರೆ ಅವರಿಗೂ ಒಂದು ಸ್ವಂತಿಕೆ ಇರುತ್ತದೆ. ಇನ್ನೊಬ್ಬರ ತಿದ್ದುವ ಶಕ್ತಿ ನನಗೆಲ್ಲಿಂದ ಬರಬೇಕು. ಅವರೇನಾದರೂ ನನ್ನ ಮಾತು ಕೇಳಿದರೆ ಓಕೆ. ತಿದ್ದುವಷ್ಟು ದೊಡ್ಡವನಲ್ಲ ನಾನು’ ಎಂದರು.