ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿದೆ. ಪ್ರೇಕ್ಷಕರು ಚಿತ್ರಮಂದಿರಗಕ್ಕೆ ಬರುತ್ತಿಲ್ಲ ಎಂಬುದರಿಂದ ಹಿಡಿದು, ಕಳೆದ ಏಳು ತಿಂಗಳಲ್ಲಿ ಯಾವುದೇ ಚಿತ್ರ ಗೆದ್ದಿಲ್ಲ ಎಂಬುದರವರೆಗೂ ಹಲವು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಈ ಸಮಸ್ಯೆಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಪರಿಹಾರ ಕಂಡುಕೊಂಡಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೇ ಆಗಸ್ಟ್ 14ರಂದು ಸಂಘದಲ್ಲಿ ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮ ಆಯೋಜಿಸಿದೆ.
ಈ ಸಂಬಂಧ ಭಾನುವಾರ ಸಂಜೆ ಕಲಾವಿದರ ಸಂಘದಿಂದ ಒಂದು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ಪತ್ರಿಕಾಗೋಷ್ಠಿಯಲ್ಲಿ ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಈ ಹೋಮದ ಕುರಿತು ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿರುವ ನಿರ್ಮಾಪಕರ ಸಂಘದ ಕಾರ್ಯದರ್ಶಿ ರಾಕ್‍ಲೈನ್ ವೆಂಕಟೇಶ್, ‘ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋವಿಡ್ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವುಗಳಾದವು. ಆಗಲೇ ಒಂದು ಹೋಮ ಮಾಡಿಸುವ ಯೋಚನೆ ಇತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕೆಲವು ದಿನಗಳ ಹಿಂದೆ ದೊಡ್ಡಣ್ಣ ಯಾಕೆ ಒಂದು ಪೂಜೆ ಮಾಡಿಸಬಾರದು ಎಂದು ಹೇಳಿದರು. 14ರಂದು ದಿನ ಚೆನ್ನಾಗಿರುವುದರಿಂದ ಅಂದು ಚಿತ್ರರಂಗದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋಮ ಮಾಡಿಸುತ್ತಿದ್ದೇವೆ’ ಎಂದರು.
ಈ ಹೋಮಕ್ಕೆ ಚಿತ್ರರಂಗಕ್ಕೆ ಯಾರನ್ನೂ ಕರೆದಿಲ್ಲ, ಆದರೆ ಎಲ್ಲರೂ ಭಾಗವಹಿಸುತ್ತಿದ್ದಾರೆ ಎಂದು ರಾಕ್‍ಲೈನ್ ವೆಂಕಟೇಶ್, ‘ಸಾಮಾನ್ಯವಾಗಿ ಸಂಘದಿಂದ ಮಾಡುವ ಕಾರ್ಯಕ್ರಮದಲ್ಲಿ ಎಲ್ಲ ಸಂಘ-ಸಂಸ್ಥೆಗಳಿಗೂ ಆಹ್ವಾನ ನೀಡಲಾಗುತ್ತದೆ. ಆದರೆ, ಈ ಹೋಮಕ್ಕೆ ಯಾರನ್ನೂ ಪ್ರತ್ಯೇಕವಾಗಿ ಕರೆಯಬೇಡಿ ಎಂದಿದ್ದೇನೆ. ಏಕೆಂದರೆ, ಇದು ಚಿತ್ರರಂಗದ ಕಾರ್ಯಕ್ರಮ. ಚಿತ್ರರಂಗದ ಒಳತಿಗಾಗಿ ಮಾಡುತ್ತಿರುವ ಹೋಮ. ಹಾಗಾಗಿ, ಎಲ್ಲರೂ ಭಾಗವಹಿಸಬೇಕು’ ಎಂದರು.
ಈ ಪೂಜೆ ಮಾಡಿಸುತ್ತಿರುವುದು ದರ್ಶನ್‍ಗಾಗಿ ಎಂಬ ಗುಸುಗುಸು ಚಿತ್ರರಂಗದಲ್ಲಿದೆ. ಆದರೆ, ಇದು ಶುದ್ಧ ಸುಳ್ಳು ಎಂದ ರಾಕ್‍ಲೈನ್, ‘ಈ ಪೂಜೆ ಮಾಡಿಸುತ್ತಿರುವುದು ದರ್ಶನ್‍ಗಾಗಿ ಪೂಜೆ ಅಲ್ಲ. ಅವರಿಗಾಗಿ ಮಾಡಬೇಕಿದ್ದರೆ, ನಾನು ವೈಯಕ್ತಿಕವಾಗಿ ನನ್ನ ಮನೆಯಲ್ಲೋ, ಅವರ ಮನೆಯಲ್ಲೋ ಮಾಡುತ್ತಿದ್ದೆ. ಇದು ಸಂಘದಿಂದ ನಡೆಯುತ್ತಿರುವ ಪೂಜೆ ಮತ್ತು ಚಿತ್ರರಂಗದಿಂದ ಒಳಿತಿಗಾಗಿ ಮಾಡುತ್ತಿರುವ ಪೂಜೆ’ ಎಂದರು.
ಆಗಸ್ಟ್ 14ರಂದು ಬೆಳಿಗ್ಗೆ ಎಂಟಕ್ಕೆ ಸಂಕಲ್ಪ ನಡೆಯಲಿದೆ. ನಂತರ ಮೂರು ಹೋಮಗಳು ನಡೆಯಲಿವೆ. ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಸರ್ಪ ಶಾಂತಿ ನಡೆಯಲಿದ್ದು, ಮಧ್ಯಾಹ್ನ ಊಟ ಏರ್ಪಾಡು ಮಾಡಲಾಗಿದೆಯಂತೆ. ಇದರಲ್ಲಿ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ.