ಕನ್ನಡದಲ್ಲಿ ಅವಿನಾಶ್ ಎಂದರೆ ಮೊದಲಿಗೆ ನೆನಪಿಗೆ ಬರುವುದು ಹಿರಿಯ ನಟ ಯಳಂದೂರು ಅವಿನಾಶ್. ಕಳೆದ ನಾಲ್ಕು ದಶಕಗಳಿಂದ ನೂರಾರು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್, ಕನ್ನಡದ ಬೇಡಿಕೆಯ ನಟರಲ್ಲೊಬ್ಬರು. ಈಗ ಇನ್ನೊಬ್ಬ ಅವಿನಾಶ್, ಕನ್ನಡಕ್ಕಿಂತ ಬೇರೆ ಭಾಷೆಯ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ.
ಈ ಅವಿನಾಶ್, ‘ಕೆಜಿಎಫ್’ ಚಿತ್ರದಲ್ಲಿ ಆ್ಯಂಡ್ರೂಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಚಿತ್ರದಲ್ಲೇ ತಮ್ಮ ಪಾತ್ರದಿಂದ ಗಮನ ಸೆಳೆದ ಅವಿನಾಶ್, ‘ಕೆಜಿಎಫ್’ ನಂತರ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ನಟಿಸಿರುವ ಅವಿನಾಶ್ ನಟಿಸಿದರು. ಇದೀಗ ಅವರು ಪರಭಾಷೆಯ ಚಿತ್ರಗಳಲ್ಲಿ ಬೇಡಿಕೆಯ ನಟರಾಗಿದ್ದಾರೆ.
ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’, ಚಿರಂಜೀವಿ ಅಭಿನಯದ ‘ವಾಲ್ಟರ್ ವೀರಯ್ಯ’, ತಮಿಳಿನಲ್ಲಿ ರಜನಿಕಾಂತ್ ಅಭಿನಯದ ‘ವೆಟ್ಟಯಾನ್’, ಸೂರ್ಯ ಅಭಿನಯದ ‘ಕಂಗುವಾ, ಆರ್ಯ ಅಭಿನಯದ ‘ಕಾದರ್ ಭಾಷ ಎಂದ್ರ ಮುತ್ತುರಾಮಲಿಂಗಂ’, ಮಲಯಾಳಂನಲ್ಲಿ ಸುರೇಶ್ ಗೋಪಿ ಅಭಿನಯದ ‘ಒರು ಪೆರುಂ ಕಲಿಯಟ್ಟಂ’, ಹಿಂದಿಯ ‘ಬೇಬಿ ಜಾನ್’ ಚಿತ್ರಗಳಲ್ಲಿ ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ತಮಗೆ ಚಿತ್ರರಂಗದಲ್ಲಿ ಒಳ್ಳೆಯ ಪೋಷಕ ನಟನಾಗಿ ಗುರುತಿಸಿಕೊಳ್ಳುವ ಆಸೆ ಎನ್ನುವ ಅವಿನಾಶ್, ‘ಒಳ್ಳೆಯ ವಿಲನ್ ಪಾತ್ರಗಳು, ಅರ್ಥಪೂರ್ಣ ಪೋಷಕ ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ. ಅಭಿನಯಕ್ಕೆ ಪ್ರಾಮುಖ್ಯತೆ ಇರಬೇಕು. ‘ಗುರುದೇವ್ ಹೊಯ್ಸಳ’ ಚಿತ್ರದಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿತ್ತು. ‘ಕಂಗುವ’ ಚಿತ್ರದಲ್ಲಿ ಸೂರ್ಯ ತಂದೆಯಾಗಿ ಅಭಿನಯಿಸಿದ್ದೇನೆ. ಒಬ್ಬ ಒಳ್ಳೆಯ ಪೋಷಕ ನಟನಾಗಿ ಗುರುತಿಸಿಕೊಳ್ಳುವಾಸೆ ಇದೆ. ಒಳ್ಳೆಯ ಪಾತ್ರಗಳಿಗಾಗಿ ಎದುರುನೋಡುತ್ತಿದ್ದೇನೆ’ ಎನ್ನುತ್ತಾರೆ.
ಮುಂಬರುವ ವಿಜಯ್ ಸೇತುಪತಿ ಅಭಿನಯದ ‘ಏಸ್’, ಅಜಿತ್ ಅಭಿನಯದ ‘ಗುಡ್ ಬ್ಯಾಡ್ ಅಗ್ಲ’, ‘ಕಿಂಗ್ಡಮ್’, ‘ಬುಲೆಟ್’, ‘ನಾಗಬಂಧಂ’ ಮುಂತಾದ ಚಿತ್ರಗಳಲ್ಲಿ ಅವಿನಾಶ್ ಈಗಾಗಲೇ ಅಭಿನಯಿಸಿದ್ದು, ಆ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ.





