ಕಳೆದ ವರ್ಷ ಬಿಡುಗಡೆಯಾದ ‘ಉಪಾಧ್ಯಕ್ಷ’ ಚಿತ್ರದಲ್ಲಿ ನಾಯಕರಾಗಿದ್ದರು ಚಿಕ್ಕಣ್ಣ. ನಂತರ ಅವರು ಯಾವೊಂದು ಚಿತ್ರದಲ್ಲೂ ನಾಯಕನಾಗಿರಲಿಲ್ಲ. ಒಂದೇ ಚಿತ್ರಕ್ಕೆ ಅವರ ನಾಯಕತ್ವ ಸೀಮಿತವಾಯ್ತಾ? ಎಂಬ ಪ್ರಶ್ನೆ ಬರುವ ಹೊತ್ತಿನಲ್ಲೇ ಅವರು, ಇದೀಗ ಇನ್ನೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಹೆಸರು ‘ಲಕ್ಷ್ಮೀ ಪುತ್ರ’.
ಕನ್ನಡ ಚಿತ್ರರಂಗದ ಬಿಡುಗಡೆಯಾಗಿ, ಸೋಲನುಭವಿಸಿದ್ದ ‘ಮಾರ್ಟಿನ್’ ಚಿತ್ರದ ನಿರ್ದೇಶಕ ಎ.ಪಿ. ಅರ್ಜುನ್, ‘ಲಕ್ಷ್ಮೀ ಪುತ್ರ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಅವರು ‘ಕಿಸ್’ ಚಿತ್ರವನ್ನು ತಮ್ಮ ಸಂಸ್ಥೆಯ ಮೂಲಕ ನಿರ್ಮಿಸಿದ್ದರು. ಅದರ ನಂತರ ವಿರಾಟ್ ಅಭಿನಯದಲ್ಲಿ ‘ಅದ್ಧೂರಿ ಲವ್ವರ್’ ಎಂಬ ಚಿತ್ರವನ್ನು ಘೋಷಿಸಿದ್ದರು. ಈ ಚಿತ್ರ ಬಿಡುಗಡೆಗೆ ಮುನ್ನವೇ, ‘ಲಕ್ಷ್ಮೀ ಪುತ್ರ’ ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದಾರೆ ಅರ್ಜುನ್.
‘ಲಕ್ಷ್ಮೀಪುತ್ರ’ ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಚಿತ್ರಕ್ಕೆ ಕೆಲಸ ಮಾಡಿದ್ದ ವಿಜಯ್ ಎಸ್. ಸ್ವಾಮಿ, ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ವಿಜಯ್‍ಗೆ ನಿರ್ದೇಶಕರಾಗಿ ಇದು ಮೊದಲ ಪ್ರಯತ್ನ.
ಈ ಚಿತ್ರವನ್ನು ಅರ್ಜುನ್ ಅವರ ಪತ್ನಿ ಅನ್ನಪೂರ್ಣ, ಎ.ಪಿ ಅರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್, ‘ಲಕ್ಷ್ಮೀಪುತ್ರ’ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ‘ಲಕ್ಷ್ಮೀಪುತ್ರ’ ಚಿತ್ರಕ್ಕಿದೆ.
ಇದೇ ತಿಂಗಳ 24ಕ್ಕೆ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ಸಜ್ಜಾಗಿದೆ.





