Mysore
20
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

‘ಮಂಕುತಿಮ್ಮನ ಕಗ್ಗ’ ಚಿತ್ರದ ಟ್ರೇಲರ್ ಬಂತು; ಮೇನಲ್ಲಿ ಚಿತ್ರ ಬಿಡುಗಡೆ

ಡಾ.ಡಿ.ವಿ. ಗುಂಡಪ್ಪನವರ ಅತ್ಯಂತ ಜನಪ್ರಿಯ ಪದ್ಯ ಪುಸ್ತಕವೆಂದರೆ ಅದು ‘ಮಂಕುತಿಮ್ಮನ ಕಗ್ಗ’. ಈಗ ‘ಮಂಕುತಿಮ್ಮನ ಕಗ್ಗ’ ಹೆಸರಿನ ಚಿತ್ರವೊಂದು ಕನ್ನಡದಲ್ಲಿ ಸದ್ದಿಲ್ಲದೆ ಬಿಡುಗಡೆಗೆ ತಯಾರಿಗೆ ನಿಂತಿದೆ.

ಹೆಸರು ಕೇಳುತ್ತಿದ್ದಂತೆಯೇ ಇದು ‘ಮಂಕುತಿಮ್ಮನ ಕಗ್ಗ’ ಕುರಿತಾದ ಚಿತ್ರ ಅಂತನಿಸಿದರೆ ಆಶ್ಚರ್ಯವಿಲ್ಲ. ಇದು ಡಿ.ವಿ.ಜಿ ಅವರ ಬಾಲ್ಯದ ದಿನಗಳ ಕುರಿತಾದ ಚಿತ್ರ. ರಾಜ ರವಿಶಂಕರ್‍ ಈ ಚಿತ್ರವನ್ನು ನಿರ್ದೇಶಿಸಿದ್ದು, ಎನ್.ಎ. ಶಿವಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಟ್ರೇಲರ್‍ ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಚಿತ್ರದ ಕುರಿತು ಮಾತನಾಡುವ ರವಿಶಂಕರ್‍, ‘ಈ ಚಿತ್ರದಲ್ಲಿ‌‌ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ.‌ ಬಾಲ್ಯದಲ್ಲಿ ಡಿ.ವಿ.ಜಿ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಅವರ ಸೋದರಮಾವ ತಿಮ್ಮಣ್ಣ ಮೇಷ್ಟ್ರು. ಸೋದರಮಾವ ಹಾಗೂ ಸೋದರಳಿಯನ ಬಾಂಧವ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಸೋಮಿ (ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ನೀಡಿದರು.

ಹಲವು ವರ್ಷಗಳಿಂದ ಪ್ರಸಾಧನ ಕಲಾವಿದನಾಗಿರುವ ಶಿವಕುಮಾರ್‍ ಅವರ ನಿರ್ಮಾಣದ ಎರಡನೆಯ ಚಿತ್ರವಂತೆ. ‘ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. 20 ವರ್ಷಗಳ ಹಿಂದೆ ‘ಅವಳೆ ನನ್ನ ಗೆಳತಿ’ ಚಿತ್ರ ನಿರ್ಮಾಣ ಮಾಡಿದ್ದೆ. ಇದು ಎರಡನೇ ಚಿತ್ರ. ಡಿ.ವಿ.ಜಿ ಅವರ ಚಿತ್ರ ಮಾಡಿರುವುದಕ್ಕೆ ಹೆಮ್ಮೆ ಇದೆ’ ಎಂದು ನಿರ್ಮಾಪಕ ಶಿವಕುಮಾರ್ ತಿಳಿಸಿದರು.

ತಿಮ್ಮಣ್ಣ ಮೇಷ್ಟ್ರು ಪಾತ್ರ ಮಾಡಿರುವುದು ಬಹಳ ಖುಷಿಯಾಗಿದೆ ಎಂದರು ಹಿರಿಯ ನಟ ರಾಮಕೃಷ್ಣ. ಚಿತ್ರದಲ್ಲಿ ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎ.ಟಿ. ರವೀಶ್‍ ಅವರ ಸಂಗೀತವಿದೆ.

Tags:
error: Content is protected !!