‘ಮಾರ್ಟಿನ್’ ಚಿತ್ರವು ದೇಶದ ಸ್ವಾಭಿಮಾನ ಮತ್ತು ಗೌರವವನ್ನು ಎತ್ತಿ ಹಿಡಿಯುವ ಚಿತ್ರವಾಗಿದೆ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.
‘ಮಾರ್ಟಿನ್’ ಚಿತ್ರದ ಮೊದಲ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಸೋಮವಾರ ಸಂಜೆ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಪತ್ರಿಕಾಗೋಷ್ಠಿಯಲ್ಲಿ 21 ದೇಶದಗಳಿಂದ ಪತ್ರಕರ್ತರು ಬಂದಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಹಾಗೆ ಬಂದ ಎಲ್ಲವನ್ನೂ ದೇವರ ನಾಡಿಗೆ ಸ್ವಾಗತ ಎಂದು ಧ್ರುವ ಸರ್ಜಾ ಸ್ವಾಗತ ಕೋರಿದರು.
ಇಂಥದ್ದೊಂದು ವಿಭಿನ್ನ ಕಥೆಗಾಗಿ ಹುಡುಕಾಟ ನಡೆಸಿದ್ದೆ ಎಂದ ಧ್ರುವ, ‘ಈ ಕಥೆಯಲ್ಲಿ ಎಲ್ಲವೂ ಇತ್ತು. ಒಂದು ವಿಭಿನ್ನ ಚಿತ್ರಕಥೆಗಾಗಿ ಹುಡುಕಾಡುತ್ತಿದ್ದೆ. ಇದನ್ನು ಬರೆದಿದ್ದು ನಮ್ಮ ಮಾವ ಅರ್ಜುನ್ ಸರ್ಜಾ. ಸಾಕಷ್ಟು ತಯಾರಿ ನಡೆಸಿಕೊಂಡು ಈ ಚಿತ್ರದಲ್ಲಿ ನಟಿಸಿದೆ. ಚಿತ್ರದಲ್ಲಿ ಒಂಬತ್ತು ಫೈಟ್‍ಗಳಿವೆ. ರಾಮ್-ಲಕ್ಷ್ಮಣ್ ಹಾಗೂ ರವಿ ವರ್ಮ ಮಾಸ್ಟರ್ ಈ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ಚಿತ್ರ ನೋಡಿದ ಮೇಲೆ ಇದು ವಿಶ್ವ ಮಾರುಕಟ್ಟೆಗೆ ಸರಿಯಾಗಿದೆ ಎಂದನಿಸಿ ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದೇವೆ’ ಎಂದರು.
ಚಿತ್ರ ತಡವಾಗಿದ್ದೇಕೆ ಎಂದು ಕಾರಣ ನೀಡಿದ ಅವರು. ‘ಒಳ್ಳೆಯ ವಿಷಯಗಳಿಗೆ ಸಹಜವಾಗಿಯೇ ಸಮಯ ಬೇಕಾಗುತ್ತದೆ. ಪ್ರತಿಯೊಂದು ವಿಷಯವನ್ನು ಬಹಳ ಚೆನ್ನಾಗಿ ತೋರಿಸಬೇಕು ಎಂಬ ಆಸೆ ಇತ್ತು. 150 ನಿಮಿಷಗಳ ಚಿತ್ರಕ್ಕಾಗಿ ಸುಮಾರು 250 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಇದೊಂದು ತಂತ್ರಜ್ಞರ ಚಿತ್ರ. ಎಲ್ಲರೂ ಬಹಳ ಶ್ರಮ ಹಾಕಿ, ಯಾವುದೇ ರಾಜಿ ಇಲ್ಲದೆ ಚಿತ್ರ ಮಾಡಿದ್ದೇವೆ’ ಎಂದರು.
ಧ್ರುವನ ಅಭಿಮಾನಿಗಳಿಗೆ ಇಷ್ಟವಾಗುವಂತಹ ಕಥೆ ಬರೆಯುವುದು ಕಷ್ಟ ಎಂದ ಅರ್ಜುನ್ ಸರ್ಜಾ, ‘ಇದು ಧ್ರುವ ಅಭಿನಯದ ಐದನೇ ಚಿತ್ರ. ಇಷ್ಟು ಚಿತ್ರಗಳಿಗೆ ಅವನು ಸಂಪಾದಿಸಿರುವ ಅಭಿಮಾನಿಗಳ ಸಂಖ‍್ಯೆ ಬಹಳ ದೊಡ್ಡದು. ಅವರನ್ನು ಅಭಿಮಾನಿಗಳೆಂದು ಕರೆಯುವುದಿಲ್ಲ. ಬದಲಿಗೆ ವಿ.ಐ.ಪಿಗಳೆನ್ನುತ್ತಾನೆ. ಅದಕ್ಕೆ ಸರಿಯಾಗಿ ಅವರು ಸಹ ಅವನಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಾರೆ. ಅವರಿಗೆ ಖುಷಿಪಡಿಸುವ ಹಾಗೆ ಬರೆಯುವುದ ಬಹಳ ಕಷ್ಟ. ಈ ಕಥೆಯನ್ನು ಅವನನ್ನು ಗಮನದಲ್ಲಿಟ್ಟುಕೊಂಡು ಬರೆಯುವುದಕ್ಕಿಂತ ಧ್ರುವನ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಬರೆದೆ. ಇದೊಂದು ದೊಡ್ಡ ಚಿತ್ರ. ನಿರ್ಮಾಪಕ ಉದಯ್ ಮೆಹ್ತಾ ಸಾಕಷ್ಟು ಖರ್ಚು ಮಾಡಿ ಚಿತ್ರ ಮಾಡಿದ್ದಾರೆ’ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕ ಉದಯ್ ಮೆಹ್ತಾ, ನಾಯಕಿಯರಾದ ವೈಭವಿ ಶಾಂಡಿಲ್ಯ ಮತ್ತು ಅನ್ವೇಷಿ ಜೈನ್, ಛಾಯಾಗ್ರಾಹಕ ಸತ್ಯ ಹೆಗಡೆ, ನೃತ್ಯ ನಿರ್ದೇಶಕರಾದ ಇಮ್ರಾನ್ ಸರ್ದಾರಿಯಾ ಮತ್ತು ಮುರಳಿ, ಚಿತ್ರಕ್ಕೆ ಕಥೆ ಬರೆದಿರುವ ಅರ್ಜುನ್ ಸರ್ಜಾ ಮುಂತಾದವರಿದ್ದರು. ಈ ಟ್ರೇಲರ್ ಬಿಡುಗಡೆ ಸಮಾರಂಭ ಮತ್ತು ಪತ್ರಿಕಾಗೋಷ್ಠಿಯಲ್ಲಿ ಅಮೇರಿಕಾ, ಇಂಗ್ಲೆಂಡ್, ದುಬೈ, ಕೊರಿಯಾ, ಜಪಾನ್, ರಷ್ಯಾ, ಮಲೇಷ್ಯಾ ಸೇರಿದಂತೆ 21 ದೇಶಗಳ 27 ಪತ್ರಕರ್ತರು ಭಾಗವಹಿಸಿದ್ದರು.





