Mysore
18
few clouds

Social Media

ಸೋಮವಾರ, 26 ಜನವರಿ 2026
Light
Dark

ತಮಿಳು, ಮಲಯಾಳಂ ಆಯ್ತು; ಇದೀಗ ತೆಲುಗಿಗೆ ಹೊರಟ KVN ಪ್ರೊಡಕ್ಷನ್ಸ್

ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆವಿಎನ್‍ ಪ್ರೊಡಕ್ಷನ್ಸ್, ಸದ್ಯ ಕನ್ನಡವಲ್ಲದೆ ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದೆ. ಇದೀಗ ತೆಲುಗು ಚಿತ್ರರಂಗಕ್ಕೂ KVN ಪ್ರೊಡಕ್ಷನ್ಸ್ ಸಂಸ್ಥೆಯು ಕಾಲಿಟ್ಟಿದ್ದು, ಚಿರಂಜೀವಿ ಅಭಿನಯದ ಚಿತ್ರವೊಂದನ್ನು ಸದ್ಯದಲ್ಲೇ ನಿರ್ಮಿಸಲಿದೆ ಎಂಬ ಮಾತೊಂದು ಕೇಳಿ ಬರುತ್ತಿದೆ.

ಹೌದು, ಟಾಲಿವುಡ್‍ಗೆ ಎಂಟ್ರಿ ಕೊಡುವುದಕ್ಕೆ KVN ಪ್ರೊಡಕ್ಷನ್ಸ್ ಸಂಸ್ಥೆಯು ಸಜ್ಜಾಗಿದ್ದು, ಸಂಸ್ಥೆಯ ಮೊದಲ ಚಿತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರಂತೆ. ಇನ್ನು, ಚಿರಂಜೀವಿ ಅಭಿನಯದಲ್ಲಿ ‘ವಾಲ್ಟರ್ ವೀರಯ್ಯ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಬಾಬಿ ಕೊಲ್ಲಿ, ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಆಗಸ್ಟ್.15ರಂದು ಚಿತ್ರದ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮೊದಲು, KVN ಪ್ರೊಡಕ್ಷನ್ಸ್ ವೆಂಕಟ್‍ನಾರಾಯಣ್‍, ಈ ವರ್ಷದ ಆರಂಭದಲ್ಲಿ ಮಲಯಾಳಂನಲ್ಲಿ ಚಿತ್ರವೊಂದನ್ನು ನಿರ್ಮಿಸುವುದಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರವನ್ನು ಅವರು ತೆಸ್ಪಿಯನ್ ಫಿಲ್ಮ್ಸ್ ಜೊತೆಗೆ ಸೇರಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಚಿದಂಬರಂ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಮಲಯಾಳಂನಲ್ಲಿ ಬಿಡುಗಡೆಯಾದ ಅತ್ಯಂತ ಯಶಸ್ವಿ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಿಸಿದ್ದು, ಇದೇ ಚಿದಂಬರಂ. ಇನ್ನು, ‘ರೋಮಾಂಚನಂ’, ‘ಆವೇಶಂ’ ಮುಂತಾದ ಚಿತ್ರಗಳಿಗೆ ಕಥೆ ಬರೆದಿರುವ ಜೀತು ಮಾಧವನ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಇದಲ್ಲದೆ, ತಮಿಳಿನಲ್ಲಿ ಈ ಸಂಸ್ಥೆಯು, ವಿಜಯ್‍ ಅಭಿನಯದಲ್ಲಿ ‘ಜನ ನಾಯಗನ್‍’ ಚಿತ್ರವನ್ನು ನಿರ್ಮಿಸುತ್ತಿದೆ. ವಿನೋದ್‍ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರದಲ್ಲಿ ವಿಜಯ್‍ ಜೊತೆಗೆ ಪೂಜಾ ಹೆಗ್ಡೆ, ಬಾಬ್ಬಿ ಡಿಯೋಲ್‍, ಗೌತಮ್‍ ಮೆನನ್, ಪ್ರಕಾಶ್‍ ರೈ, ಪ್ರಿಯಾಮಣಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸತ್ಯನ್‍ ಸೂರ್ಯನ್‍ ಛಾಯಾಗ್ರಹಣ ಮತ್ತು ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ.

ಕನ್ನಡದಲ್ಲಂತೂ KVN ಪ್ರೊಡಕ್ಷನ್ಸ್ನ ವೆಂಕಟ್‍ನಾರಾಯಣ್‍ ಎರಡು ಬಿಗ್‍ ಬಜೆಟ್‍ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಈ ಪೈಕಿ ಮೊದಲನೆಯದು ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’. ‘ಜೋಗಿ’ ಪ್ರೇಮ್‍ ನಿರ್ದೇಶನದ ಈ ಚಿತ್ರವು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನು, ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರದ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗಲಿದೆ.

Tags:
error: Content is protected !!