ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಇಂದು (ಏ.೧೬) ನಿಧನರಾಗಿದ್ದಾರೆ. ಹೃದಯಾಘಾತದಿಂದ ಮರಣ ಹೊಂದಿದ ದ್ವಾರಕೀಶ್ ಅವರಿಗಾಗಿ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ.
ತನ್ನ ಗೆಳೆಯ ದ್ವಾರಕೀಶ್ ನಿಧನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೇಶ್ ಅವರ ನಿಧನ ನನಗೆ ಅತೀವ ನೋವು ತಂದಿದೆ.. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ ದೊಡ್ಡ ನಿರ್ಮಾಪಕನಾಗಿ, ನಿರ್ದೇಶಕನಾಗಿ ತನ್ನನ್ನು ತಾನು ಎತ್ತರಕ್ಕೆ ಬೆಳೆಸಿದ.. ಅವರೊಂದಿಗಿನ ಹಳೆಯ ನೆನಪುಗಳು ನನ್ನನ್ನು ಕಾಡುತ್ತಿದೆ ಅವರ ಆತ್ಮೀಯರು ಹಾಗೂ ಕುಟುಂಬಕ್ಕೆ ನನ್ನ ಭಾವಪೂರ್ಣ ಸಂತಾಪ ಎಂದು ಕಂಬನಿ ಮಿಡಿದಿದ್ದಾರೆ.
‘ದ್ವಾರಕೀಶ್ ಚಿತ್ರ’ ಸಂಸ್ಥೆಯ ಮೂಲಕ 50ಕ್ಕೂ ಅಧಿಕ ಸಿನಿಮಾಗಳನ್ನು ದ್ವಾರಕೀಶ್ ಅವರು ನಿರ್ಮಾಣ ಮಾಡಿದ್ದರು. ಅದರಲ್ಲಿ ಒಂದಂತೆ ನಟ ರಜನಿಕಾಂತ್ ಅವರು ನಟಿಸಿದ ʼಅಡುತ ವಾರಿಸುʼ ಸಿನಿಮಾವನ್ನು ದ್ವಾರಕೀಶ್ ಅವರು ನಿರ್ಮಾಣ ಮಾಡಿದ್ದರು. ಈ ಸಿನಿಮಾ 1983ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ನಾಯಕಿಯಾಗಿ ಶ್ರೀದೇವಿ ಬಣ್ಣ ಹಚ್ಚಿದ್ದರು.
ನಾಳೆ (ಬುಧವಾರ, ಏಪ್ರಿಲ್ 17) ಬೆಳಗ್ಗೆ 11 ಗಂಟೆ ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸಂಬಂಧಿಕರ ಮೂಲಗಳು ತಿಳಿಸಿವೆ.