ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 3’ ಚಿತ್ರ ಬರುತ್ತದೋ, ಇಲ್ಲವೋ ಎಂಬ ಬಗ್ಗೆ ಹಲವು ಉಹಾಪೋಹಗಳಿದ್ದವು. ಈಗ ಈ ಕುರಿತು ನಿರ್ದೇಶಕ ಸುಕುಮಾರ್ ಅವರೇ ಅಧಿಕೃತ ಸುದ್ದಿ ಕೊಟ್ಟಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ ಎಂದು ಹೇಳುವ ಮೂಲಕ ಚಿತ್ರ ಜೀವಂತವಾಗಿದೆ ಎಂದು ಸುಳಿವು ನೀಡಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಲೂಟಿ ಮಾಡಿತ್ತು. ಈ ಚಿತ್ರದ ಬಿಡುಗಡೆಗೂ ಮುನ್ನವೇ ಇದರ ಮುಂದುವರೆದ ಭಾಗವಾಗಿ ‘ಪುಷ್ಪ 3 – The Rampage’ ಎಂಬ ಚಿತ್ರ ಬಿಡುಗಡೆ ಆಗುತ್ತದೆ ಮತ್ತು ಅದರಲ್ಲಿ ವಿಜಯ್ ದೇವರಕೊಂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ, ‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಇನ್ನೊಂದು ಭಾಗ ಬರುವ ಕುರಿತು ಅಧಿಕೃತವಾಗಿ ಸುಳಿವು ನೀಡಲಾಗಿತ್ತು. ಆದರೆ, ಚಿತ್ರ ಬಿಡುಗಡೆಯಾಗೋದು ಯಾವಾಗ? ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬಂದಿತ್ತು. ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಇಬ್ಬರೂ ಬೇರೆಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ‘ಪುಷ್ಪ 3’ ಸದ್ಯಕ್ಕಿಲ್ಲ ಎಂದು ಹೇಳಲಾಗಿತ್ತು. ಚಿತ್ರ ಯಾವಾಗ ಬರುತ್ತದೋ ಗೊತ್ತಿಲ್ಲ. ಆದರೆ, ಚಿತ್ರವಾಗುತ್ತಿರುವುದಂತೂ ನಿಜ. ಹಾಗಂತ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಇಬ್ಬರೂ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ದುಬೈನಲ್ಲಿ ಸೈಮಾ ಪ್ರಶಸ್ತಿ ಸಮಾರಂಭ ನಡೆಯಿತು. ಈ ಪೈಕಿ ತೆಲುಗಿನಿಂದ ‘ಪುಷ್ಪ 2’ ಚಿತ್ರವು ಅತ್ಯುತ್ತಮ ನಟ (ಅಲ್ಲು ಅರ್ಜುನ್), ಅತ್ಯುತ್ತಮ ನಟಿ (ರಶ್ಮಿಕಾ ಮಂದಣ್ಣ), ಅತ್ಯುತ್ತಮ ನಿರ್ದೇಶಕ (ಸುಕುಮಾರ್), ಅತ್ಯುತ್ತಮ ಸಂಗೀತ ನಿರ್ದೇಶಕ (ದೇವಿ ಶ್ರೀ ಪ್ರಸಾದ್) ಮತ್ತು ಅತ್ಯುತ್ತಮ ಗಾಯಕ (ಶಂಕರ್ ಬಾಬು ಕಂದುಕೂರಿ) ಸೇರಿದಂತೆ ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಹಾಜರಿದ್ದ ಸುಕುಮಾರ್ ಮತ್ತು ಅಲ್ಲು ಅರ್ಜುನ್, ‘ಪುಷ್ಪ 3’ ಚಿತ್ರ ಬರುತ್ತಿರುವುದು ನಿಜ ಮತ್ತು ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಪ್ರಗತಿಯಲ್ಲಿ ಎಂದು ಸುಳಿವು ನೀಡಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ‘ಪುಷ್ಪ‘ ಮತ್ತು ‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ರಾವ್ ರಮೇಶ್, ತಾರಕ್ ಪೊನ್ನಪ್ಪ, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್, ಜಗಪತಿ ಬಾಬು, ಧನಂಜಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.





