1978 ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ಅಭಿನಯದ ‘ಕಿಲಾಡಿ ಕಿಟ್ಟು’ ಚಿತ್ರದ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಸುಧಾರಾಣಿ, ನಂತರ 1986ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರದ ಮೂಲಕ ನಾಯಕಿಯಾದರು. ನಂತರದ ವರ್ಷಗಳಲ್ಲಿ ಹಲವು ಚಿತ್ರಗಳಲ್ಲಿ, ಹಲವು ಜನಪ್ರಿಯ ನಟರ ಜೊತೆಗೆ ನಟಿಸಿದ ಸುಧಾರಾಣಿ, ಇದೀಗ ನಿರ್ಮಾಪಕಿಯಾಗಿದ್ದಾರೆ.
ಸುಧಾರಾಣಿ ಸದ್ದಿಲ್ಲದೆ ‘ಘೋಸ್ಟ್ – ದಿ ದೆವ್ವ’ ಎಂಬ ಕಿರುಚಿತ್ರವನ್ನು ನಿರ್ಮಿಸುವುದರ ಜೊತೆಗೆ ಅದರಲ್ಲಿ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಆ ಧಾರಾವಾಹಿ ಹಿಂದಿರುವ ತಂಡವೇ, ಇಲ್ಲೂ ಕೆಲಸ ಮಾಡಿರುವುದು ವಿಶೇಷ.
ಈ ಕಿರುಚಿತ್ರ ನಿರ್ಮಿಸುತ್ತಿರುವ ಕುರಿತು ಮಾತನಾಡಿರುವ ಸುಧಾರಾಣಿ, ‘ಜಗತ್ತಿನಲ್ಲಿ ಒಳ್ಳೆಯದು ಹೇಗಿದೆಯೋ ಹಾಗೆ ಕೆಟ್ಟದ್ದು ಇದೆ. ದೇವರು ಇದ್ದಾನೆ. ದೆವ್ವವು ಇದೆ. ಇದೆಲ್ಲವೂ ನಮ್ಮ ನಮ್ಮ ಕಲ್ಪನೆಗೆ ಬಿಟ್ಟದ್ದು. ಈ ವಿಚಾರದ ಮೇಲೆ ಬಂದಂತಹ ಒಂದು ಎಳೆಯನ್ನಿಟ್ಟುಕೊಂಡು ಕಿರು ಚಿತ್ರ ಮಾಡಲಾಗಿದೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ನಿರ್ದೇಶಕರು ಈ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ. ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ’ ಎಂದರು.
ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ, ಕಿರುಚಿತ್ರವನ್ನು ನಿರ್ದೇಶಿಸಿರುವ ಸುದೇಶ್ ಕೆ. ರಾವ್ ಮಾತನಾಡಿ, ‘ನಾನು ಇದುವರೆಗೂ ಹಲವು ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೆ. ‘ಘೋಸ್ಟ್’ ಒಂದು ವಿಶೇಷ ಕಥೆಯಾಗಿ ನಿಲ್ಲುತ್ತದೆ. ಪ್ರಪಂಚದಲ್ಲಿ ಇರುವುದೆಲ್ಲವೂ ಪಾಸಿಟಿವ್. ನಾವೇ ಎಲ್ಲದರಲ್ಲೂ ನೆಗೆಟಿವ್ ಹುಡುಕಿ, ನಮ್ಮ ತಲೆ ಮತ್ತು ಮನಸ್ಸನ್ನು ಕೆಡಿಸಿಕೊಳ್ಳುತ್ತೇವೆ. ಅಂತಹ ಎಲ್ಲರಿಗೂ ಈ ಶಾರ್ಟ್ ಫಿಲ್ಮ್ ಪರಿಹಾರ ನೀಡಬಹುದು’ ಎಂದು ಹೇಳಿದರು.
‘ಘೋಸ್ಟ್’ ಕಿರುಚಿತ್ರಕ್ಕೆ ‘ದಿ ದೆವ್ವ’ ಎಂಬ ಅಡಿಬರಹವಿದೆ.





