Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

‘ಸಿಂಪಲ್’ ಸುನಿ ‘ಗತವೈಭವ’ಕ್ಕೆ ಸುದೀಪ್ ಬೆಂಬಲ …

‘ಸಿಂಪಲ್’ ಸುನಿ ನಿರ್ದೇಶನದ ಹೊಸ ಚಿತ್ರ ‘ಗತವೈಭವ’ ಇದೇ ನವೆಂಬರ್ 14ರಂದು ಬಿಡುಗಡೆಯಾಗುತ್ತಿದೆ. ಇಲ್ಲಿಯವರೆಗೂ ಟೀಸರ್ ಮತ್ತು ಹಾಡುಗಳಿಂದಲೇ ಕುತೂಹಲ ಮೂಡಿಸಿದ್ದ ಸುನಿ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ನಟ ಸುದೀಪ್‍ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗದ ಬೆಸ್ಟ್ ನಿರ್ದೇಶಕರಲ್ಲಿ ಸುನಿ ಕೂಡ ಒಬ್ಬರು. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ನನಗಿನ್ನೂ ಸಿಕ್ಕಿಲ್ಲ. ಒಂದಲ್ಲಾ ಒಂದು ದಿನ ಅವರ ಜೊತ ಕೆಲಸ ಮಾಡಬಹುದು. ಚಿತ್ರದ ಹೀರೋ ದುಷ್ಯಂತ್, ನಾಯಕಿ ಆಶಿಕಾ ರಂಗನಾಥ್ ಎಲ್ಲರೂ ಚೆನ್ನಾಗಿ ಕಾಣುತ್ತಿದ್ದಾರೆ. ಈ ಚಿತ್ರದ ಹೀರೋ ದುಷ್ಯಂತ್ ಅವರಿಗೆ ನಾನು ಟಿಪ್ಸ್ ಕೊಡುವುದು ಏನಿಲ್ಲ. ಅವರು ತುಂಬಾ ಚೆನ್ನಾಗಿ ಮಾತನಾಡಿದ್ದು ನೋಡಿದೆ. ನಾನು ಅವರಿಂದ ಕಲಿಯಬೇಕು. ದುಷ್ಯಂತ್‍ ಹೇಗೆ 10 ನಿಮಿಷಗಳ ಕಾಲ ಅಷ್ಟೊಂದು ಅಚ್ಚುಕಟ್ಟಾಗಿ ಎಲ್ಲರನ್ನ ತಮ್ಮ ಮಾತಿನಿಂದ ಹಿಡಿದಿಟ್ಟುಕೊಂಡರು ಅಂತ ಯೋಚಿಸುತ್ತಿದ್ದೆ. ಆಮೇಲೆ ಗೊತ್ತಾಯ್ತು ದುಷ್ಯಂತ್ ಅವರು ರಾಜಕಾರಣಿ ಮಗ ಅಂತ’ ಎಂದು ಹೇಳಿದರು.

ಇದನ್ನು ಓದಿ: ನವೆಂಬರ್.14ರಂದು ತೆರೆಮೇಲೆ ಫ್ಯಾಂಟಸಿ ‘ಗತವೈಭವ’

‘ಗತವೈಭವ’ ಚಿತ್ರದಲ್ಲಿ ಹೊಸ ಹೀರೋ ದುಷ್ಯಂತ್ ಜೊತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ‘ಗತವೈಭವ’ ಸಾಕಷ್ಟು ರೀತಿಯಲ್ಲಿ ಸ್ಪೆಷಲ್ ಚಿತ್ರ ಎನ್ನುವ ಆಶಿಕಾ ತಾನು ಅತಿ ಹೆಚ್ಚು ದಿನಗಳ ಕಾಲ ಶೂಟ್ ಮಾಡಿದ ಸಿನಿಮಾ ಎನ್ನುತ್ತಾರೆ. ನಾಲ್ಕು ಸಿನಿಮಾ ನೋಡುವ ಅನುಭವ ಆಗುತ್ತದೆ ಎಂದ ಅವರು, ನಾಲ್ಕು ಕಥೆ, ನಾಲ್ಕು ಪಾತ್ರಗಳು ಚಿತ್ರದ ಹೈಲೈಟ್‍ ಎಂದರು. ಇನ್ನು, ದುಷ್ಯಂತ್‍ ಎಂಟು ವರ್ಷಗಳ ಪ್ರಯತ್ನದ ಬಳಿಕ ನಟನಾಗಿ ಪ್ರೇಕ್ಷಕರ ಮುಂದೆ ಬಂದು ನಿಂತಿರುವುದಾಗಿ ಹೇಳಿಕೊಂಡರು.

ಮಿಕ್ಕಂತೆ ಚಿತ್ರದಲ್ಲಿ ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ವಿಲೀಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಮತ್ತು ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಹಾಗೂ ಸಿಂಪಲ್ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ.

Tags:
error: Content is protected !!