Mysore
18
overcast clouds

Social Media

ಭಾನುವಾರ, 25 ಜನವರಿ 2026
Light
Dark

ʼಸ್ಪಾರ್ಕ್‌ʼ ಪೋಸ್ಟರ್‌ ವಿವಾದಕ್ಕೆ ತೆರೆ: ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ಮಹಾಂತೇಶ್‍

‘ಸ್ಪಾರ್ಕ್’ ಚಿತ್ರದ ವಿವಾದ ಒಂದೇ ದಿನಕ್ಕೆ ಬಗೆಹರಿದಿದೆ. ತಮ್ಮ ಫೋಟೋವನ್ನು ಅನುಮತಿ ಇಲ್ಲದೆ ಬಳಸಿಕೊಂಡಿದ್ದಾಗಿ ನಟ-ನಿರ್ದೇಶಕ ರಮೇಶ್‍ ಇಂದಿರಾ ಬೇಸರ ವ್ಯಕ್ತಪಡಿಸಿದ್ದರು. ‘ಸ್ಪಾರ್ಕ್’ ಚಿತ್ರ ತಂಡದ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈ ವಿಷಯವಾಗಿ ನಿರ್ದೇಶಕ ಮಹಾಂತೇಶ್‍ ಹಂದ್ರಾಳ್‍ ಕ್ಷಮೆ ಕೇಳಿದ್ದು, ಪ್ರಕರಣ ತಣ್ಣಗಾಗಿದೆ.

ಶುಕ್ರವಾರ, ಪ್ರೇಮ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಸ್ಪಾರ್ಕ್’ ಎಂಬ ಚಿತ್ರದಲ್ಲಿನ ಅವರ ಪೋಸ್ಟರ್‍ ಬಿಡುಗಡೆಯಾಗಿತ್ತು. ಈ ಪೋಸ್ಟರ್‍ನಲ್ಲಿ ಪ್ರೇಮ್‍, ಬೆಂಕಿ ಅಂಟಿರುವ ಭಿತ್ತಿಪತ್ರದಿಂದ ತಮ್ಮ ಸಿಗಾರ್‍ ಹಚ್ಚುತ್ತಿರುವ ದೃಶ್ಯವಿದೆ. ಈ ಭಿತ್ತಿಪತ್ರದಲ್ಲಿ ರಮೇಶ್‍ ಇಂದಿರಾ ಅವರ ಭಾವಚಿತ್ರವಿದ್ದು, ತಮ್ಮ ಭಾವಚಿತ್ರವನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವುದರಕ್ಕೆ ಚಿತ್ರತಂಡದ ಬಗ್ಗೆ ರಮೇಶ್ ಇಂದಿರಾ ಬೇಸರಗೊಂಡಿದ್ದರು. ಅಷ್ಟೇ ಅಲ್ಲ, ಚಿತ್ರತಂಡ ಮತ್ತು ಪ್ರೇಮ್‍ ವಿರುದ್ಧ ಕಾನೂನು ಕ್ರಮ ತೆಗೆದಕೊಳ್ಳುವುದಾಗಿ ಹೇಳಿದ್ದರು.

‘ಸ್ಪಾರ್ಕ್‌’ ಚಿತ್ರವನ್ನು ಮಹಾಂತೇಶ್ ಹಂದ್ರಾಳ್ ನಿರ್ದೇಶಿಸುತ್ತಿದ್ದು, ಇದು ಅವರಿಗೆ ನಿರ್ದೇಶಕರಾಗಿ ಮೊದಲ ಚಿತ್ರ. ಈ ಕುರಿತು ಮಾತನಾಡಿರುವ ಅವರು, ‘ರಮೇಶ್‌ ಇಂದಿರಾ ಅವರಿಂದ ಅನುಮತಿ ಪಡೆದು ಅವರ ಫೋಟೋ ಬಳಸಿಕೊಳ್ಳಬೇಕಿತ್ತು. ಮ್ಯಾನೇಜರ್‌ ಹೇಳಿದ್ದಾರೆಂದು ಫೋಟೋ ಬಳಸಲಾಗಿದೆ. ಒಂದು ಸಣ್ಣ ಗೊಂದಲದಿಂದ ತಪ್ಪಾಗಿದೆ. ಈ ಕುರಿತು ರಮೇಶ‍್ ಇಂದಿರಾ ಬಳಿ ಕ್ಷಮೆ ಕೇಳಿದ್ದೇನೆ. ‘ಮೊದಲು ನೀವು ಒಮ್ಮೆ ತಿಳಿಸಬೇಕಿತ್ತು. ಆದರೆ, ಅದು ನಡೆದು ಹೋಗಿದೆ. ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ’ ಎಂದು ರಮೇಶ್‌ ಇಂದಿರಾ ಹೇಳಿದ್ದಾರೆ’ ಎಂದು ಮಹಾಂತೇಶ್‍ ಹೇಳಿಕೊಂಡಿದ್ದಾರೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸ್ಪಾರ್ಕ್‌’ ಚಿತ್ರವನ್ನು ಡಾ. ಗರಿಮಾ ಅವಿನಾಶ್ ವಸಿಷ್ಠ ನಿರ್ಮಿಸುತ್ತಿದ್ದಾರೆ. ಮಹಾಂತೇಶ್‍ ಹಂದ್ರಾಳ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಅಣ್ಣನ ಮಗ ನಿರಂಜನ್‌ ಮತ್ತು ರಚನಾ ಇಂದರ್‍ ನಟಿಸುತ್ತಿರುವ ‘ಸ್ಪಾರ್ಕ್’ ಚಿತ್ರದಲ್ಲಿ ಪ್ರೇಮ್‍ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Tags:
error: Content is protected !!