Mysore
26
scattered clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

‘ಸ್ಮೈಲ್‍ ಗುರು’ ರಕ್ಷಿತ್‍ಗೆ ನಾಯಕಿಯಾದ ‘ನೆನಪಿರಲಿ’ ಪ್ರೇಮ್‍ ಮಗಳು

ಈ ಅಕ್ಟೋಬರ್ 27 ಬಂದರೆ ಒಂದು ವರ್ಷ ಆಗುತ್ತದೆ ‘ಟಗರು ಪಲ್ಯ’ ಬಿಡುಗಡೆಯಾಗಿ. ಚಿತ್ರ ಬಿಡುಗಡೆಯಾದರೂ ಅದರಲ್ಲಿ ನಾಯಕಿಯಾಗಿದ್ದ ‘ನೆನಪಿರಲಿ’ ಪ್ರೇಮ್‍’ ಮಗಳು ಇನ್ನೊಂದು ಚಿತ್ರ ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ಪ್ರೇಮ್‍, ಒಳ್ಳೆಯ ಪಾತ್ರಗಳು ಮತ್ತು ಕಥೆಗಳಿಗೆ ಮಾತ್ರ ಆದ್ಯತೆ ಎಂದು ಹೇಳಿದ್ದರು.

ಈಗ ಕೊನೆಗೂ ಅಮೃತಾಗೆ ಹೊಸದೊಂದು ಚಿತ್ರ ಸಿಕ್ಕಿದೆ. ‘ಸ್ಮೈಲ್‍ ಗುರು’ ಎಂಬ ಕಿರುಚಿತ್ರ ಮಾಡಿ, ಆ ನಂತರ ‘ಕನ್ನಡತಿ’ ಧಾರಾವಾಹಿಯ ಮೂಲಕ ಜನಪ್ರಿಯರಾಗಿದ್ದ ರಕ್ಷಿತ್‍, ಈಗ ಹೀರೋ ಆಗಿರುವುದು, ‘ಆಕಾಶ್’, ‘ಅರಸು’, ‘ಮೆರವಣಿಗೆ’ಯಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ಮಹೇಶ್‍ ಬಾಬು ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ಅಮೃತಾ ಪ್ರೇಮ್‍ ಆಯ್ಕೆಯಾಗಿದ್ದಾರೆ.

ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಮತ್ತು ಈಗಾಗಲೇ ‘ವೀರ ಮದಕರಿ’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಜೆರುಷಾ ನಾಯಕಿ ಎಂಬ ಸುದ್ದಿ ಬಂದಿತ್ತು. ಿನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದ್ದ ಮಹೇಶ್‍ ಬಾಬುಗೆ ಅಮೃತಾ ಸಿಕ್ಕಿದ್ದಾರೆ.

ಮಹೇಶ್‍ ಬಾಬು ನಿರ್ದೇಶನದ ‘ಅಪರೂಪ’ ಕಳೆದ ವರ್ಷ ಬಿಡುಗಡೆಯಾಗಿತ್ತು. ಹೊಸಬರ ಜೊತೆಗೆ ಹೆಚ್ಚಾಗಿಯೇ ಸಿನಿಮಾ ಮಾಡುತ್ತಿರುವ ಮಹೇಶ್ ಬಾಬು, ಆ ಚಿತ್ರದ ನಂತರ ರಕ್ಷಿತ್‍ಗೆ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದರು. ಆ ಚಿತ್ರ ಕೆಲವು ತಿಂಗಳುಗಳ ಹಿಂದೆ ಸೆಟ್ಟೇರಿತ್ತು. ವಿಶೇಷವೆಂದರೆ, ‘ನೆನಪಿರಲಿ’ ಪ್ರೇಮ್‍ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದರು. ಈಗ ಅವರ ಮಗಳು ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಮಹೇಶ್‍ ಬಾಬು ಚಿತ್ರಗಳೆಂದರೆ ಪ್ರೇಮಕಥೆಗಳೇ ಆಗಿರುತ್ತವೆ ಎಂಬುದು ಇಷ್ಟೊತ್ತಿಗೆ ಪ್ರೇಕ್ಷಕರಿಗೆ ಖಾತ್ರಿಯಾಗಿಬಿಟ್ಟಿದೆ. ಈ ಚಿತ್ರ ಸಹ ಅದೇ ಜಾನರ್‍ನ ಒಂದು ಚಿತ್ರ. ಎಂ.ಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆಎಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸ್ಮೈಲ್ ಗುರು ರಕ್ಷಿತ್ ಅವರೇ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

Tags:
error: Content is protected !!