Mysore
17
clear sky

Social Media

ಭಾನುವಾರ, 05 ಜನವರಿ 2025
Light
Dark

‘ನಾನು ಮತ್ತು ಗುಂಡ ೨’ ಚಿತ್ರಕ್ಕೆ ಡಬ್ಬಿಂಗ್‍ ಮಾಡಿದ ಸಿಂಬ

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಶಿವರಾಜ್‍ ಕೆ.ಆರ್‍. ಪೇಟೆ ಅಭಿನಯದ ‘ನಾನು ‘ಮತ್ತು ಗುಂಡ’ ಚಿತ್ರದ ಮುಂದುವರೆದ ಭಾಗ ಬಂದಿರುವ ವಿಷಯ ಗೊತ್ತೇ ಇದೆ. ಈಗ ಆ ಚಿತ್ರದ ಮುಂದುವರೆದ ಭಾಗ ಬರುತ್ತಿದ್ದು, ಅದರಲ್ಲಿ ರಾಕೇಶ್‍ ಅಡಿಗ ಜೊತೆಗೆ ಸಿಂಬ ಹೆಸರಿನ ಶ್ವಾನ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.

ರಘು ಹಾಸನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಕೆಲಸ ಈಗಷ್ಟೇ ಶುರುವಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ಸಿಂಬಾ ತಾನೇ ಡಬ್ ಮಾಡುತ್ತಿದೆ. ಇಡೀ ಚಿತ್ರದಲ್ಲಿ ಸಿಂಬಾನ ಒರಿಜಿನಲ್ ಸೌಂಡ್ ಇರುತ್ತದೆ. ಡಬ್ಬಿಂಗ್ ಅಂದರೆ, ಚಿತ್ರದಲ್ಲಿ ಎಲ್ಲಿ ಅವಶ್ಯಕತೆ ಇದೆಯೋ, ಅಲ್ಲಿ ಅದರ ಬೊಗಳೋ ಸೌಂಡ್ ರೆಕಾರ್ಡ್ ಮಾಡಲಾಗುತ್ತಿದೆ.

ಈ ಕುರಿತು ಮಾತನಾಡುವ ನಿರ್ದೇಶಕ ರಘು ಹಾಸನ್‍, ‘ಸಿಂಬಾನ ನೈಜ ಶಬ್ಧವನ್ನೇ ನಾವು ರೆಕಾರ್ಡ್ ಮಾಡುತ್ತಿದ್ದೇವೆ. ಎಮೋಷನಲ್ ದೃಶ್ಯಗಳಲ್ಲೂ ಸಿಂಬಾ ಡಬ್ಬಿಂಗ್ ಮಾಡುತ್ತಿದೆ. ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಭಾರತೀಯ ಚಿತ್ರರಂಗದಲ್ಲೇ, ಶ್ವಾನದಿಂದ ಡಬ್‍ ಮಾಡಿಸುತ್ತಿರುವ ಪ್ರಯತ್ನ ಇದೇ ಮೊದಲು ಎನ್ನಬಹುದು. ಮೊದಲ ಭಾಗದ ಕೆಲವು ದೃಶ್ಯಗಳಲ್ಲೂ ಡಬ್‍ ಮಾಡಿಸಲಾಗಿತ್ತು. ಮುಂದುವರೆದ ಭಾಗದಲ್ಲಿ ಪೂರ್ತಿ ಸಿಂಬ ಡಬ್‍ ಮಾಡುತ್ತಿದೆ’ ಎನ್ನುತ್ತಾರೆ.

ಡಬ್ಬಿಂಗ್ ಕೆಲಸ ಆದ್ಮೇಲೆ ಚಿತ್ರದ DI ಮತ್ತು ಹಿನ್ನೆಲೆ ಸಂಗೀತದ ಕೆಲಸ ಶುರು ಮಾಡಲಾಗುತ್ತದೆ. ಈ ಚಿತ್ರವು ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

‘ನಾನು ಮತ್ತು ಗುಂಡ 2’ ಚಿತ್ರವನ್ನು ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ರಘು ಹಾಸನ್‍ ನಿರ್ಮಾಣ ಮಾಡುತ್ತಿದ್ದು, ಆರ್.ಪಿ. ಪಟ್ನಾಯಕ್ ಸಂಗೀತ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣವಿದೆ. ರಾಕೇಶ್ ಅಡಿಗಗೆ ನಾಯಕಿಯಾಗಿ ರಚನಾ ಇಂದರ್‍ ನಟಿಸುತ್ತಿದ್ದಾರೆ.

Tags: