ಬೆಂಗಳೂರು: ದ್ವಾರಕೀಶ್ ಹುಣಸೂರಿನಲ್ಲಿ ಹುಟ್ಟಿದವರು. ತವರಿನ ಬಗ್ಗೆ ಬಹಳ ಪ್ರೇಮವಿತ್ತು. ಒಮ್ಮೆ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ದ್ವಾರಕೀಶ್ ಅವರೊಂದಿಗೆ ಹೋಗಿದ್ದೆ ಎಂದು ಹಾಸ್ಯ ನಟ ದ್ವಾರಕೀಶ್ ಅವರೊಂದಿಗಿದ್ದ ತಮ್ಮ ಒಡನಾಟವನ್ನು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.
ದ್ವಾರಕೀಶ್ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಒಬ್ಬ ನಟನಾಗಿ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಕಾಣಿಕೆ ಸಲ್ಲಿಸಿದ್ದಾರೆ. ದ್ವಾರಕೀಶ್ ಅವರು ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ಚಿತ್ರಗಳನ್ನು ನೋಡಿದ್ದೇನೆ ಎಂದು ಹೇಳಿದರು.
ದ್ವಾರಕೀಶ್ ಸಿನಿಮಾದಲ್ಲಿ ಹಲವಾರು ಏಳುಬೀಳು ಕಂಡಿದ್ದಾರೆ. ಸೋತಾಗ ಎದೆಗುಂದದೇ ಮುಂದೆ ಸಾಗಿದ ಅವರ ಆತ್ಮಸ್ಥೈರ್ಯ ಅಭಿನಂದನೀಯ. ಕನ್ನಡ ಚಿತ್ರರಂಗಕ್ಕೆ ನಟ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ದ್ವಾರಕೀಶ್ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಹಾಸ್ಯನಟರಾಗಿ, ನಾಯಕ ನಟರಾಗಿಯೂ ಉತ್ತಮ ಅಭಿನಯ ನೀಡಿದವರು ಎಂದರು.
ದ್ವಾರಕೀಶ್ ನಮ್ಮೂರಿನವ್ರು, ತುಂಬಾ ಕಷ್ಟ ಜೀವಿ, ಒಮ್ಮೆ ಅವರೊಂದಿಗೆ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವಾಗ ಸಿನಿಮಾ, ರಾಜಕೀಯ, ಸಾಮಾಜಿಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ ಎಂದು ಅವರೊಂದಿಗಿನ ಹಳೇ ನೆನಪುಗಳನ್ನು ಮೆಲುಕು ಹಾಕಿದರು.





