Mysore
19
few clouds

Social Media

ಶನಿವಾರ, 31 ಜನವರಿ 2026
Light
Dark

ನೀವು ಮಾಡುತ್ತಿರುವುದು ಸರಿಯಾ, ನೀವೇ ಯೋಚಿಸಿ: ಶಿವರಾಜಕುಮಾರ್

shivarajkumar

‘ದಯವಿಟ್ಟು ಬೇರೆ ತರಹ ಅರ್ಥ ಮಾಡಿಕೊಳ‍್ಳಬೇಡಿ. ನಿಮ್ಮ ಮನಸ್ಸನ್ನು ನೀವೇ ಮುಟ್ಟಿ ನೋಡಿಕೊಳ್ಳಿ, ನಾವು ಮಾಡುತ್ತಿರುವುದು ಸರಿಯಾ ಎಂದು ಯೋಚನೆ ಮಾಡಿ. ಆಗ ನಿಮಗೇ ಉತ್ತರ ಸಿಗುತ್ತದೆ’ ಎಂದು ಶಿವರಾಜಕುಮಾರ್ ಹೇಳಿದ್ದಾರೆ.

ಕನ್ನಡದ ಬಗ್ಗೆ ತಮಿಳಿನ ಜನಪ್ರಿಯ ನಟ ಕಮಲ್‍ ಹಾಸನ್‍ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘ಕನ್ನಡ ಹುಟ್ಟಿದ್ದು ತಮಿಳಿನಿಂದ …’ ಎಂಬರ್ಥದ ಮಾತುಗಳನ್ನಾಡಿದ್ದರು. ಅವರ ಮಾತುಗಳಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಕಮಲ್ ಹಾಸನ್‍ ಮಾತನಾಡುವ ಸಂದರ್ಭದಲ್ಲಿ ಶಿವರಾಜಕುಮಾರ್ ಸಹ ಹಾಜರಿದ್ದರು. ಈ ವಿಷಯದ ಬಗ್ಗೆ ಶಿವರಾಜಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದಿರುವ ಬಗ್ಗೆಯೂ ಚರ್ಚೆಯಾಗಿತ್ತು.

ಈ ಕುರಿತು ಬುಧವಾರ ನಡೆದ ಸಮಾರಂಭವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಶಿವರಾಜಕುಮಾರ್, ‘ಕಮಲ್‍ ಹಾಸನ್‍ ಕನ್ನಡದ ಮೇಲೆ ಪ್ರೀತಿ ಇದೆ. ಅವರು ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರಿಗೆ ಬಂದಾಗಲೂ ಕನ್ನಡದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ನಾನು ಅವರನ್ನು ನೋಡಿ ಬೆಳೆದವನು. ನಾನು ಅವರ ಅಭಿಮಾನಿ. ಕಮಲ್‍ ಹಾಸನ್‍ ಅವರಿಗೆ ನಾನು ಕೊಡುವ ಸ್ಥಾನ ಬೇರೆ. ಅವರಿಂದ ಸಾಕಷ್ಟು ಸ್ಫೂರ್ತಿಗೊಂಡಿದ್ದೇನೆ. ಅವರು ನನ್ನ ಮೆಚ್ಚಿನ ನಟ. ಖಂಡಿತಾ ಅವರಿಗೆ ಗೊತ್ತಾಗುತ್ತದೆ. ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಕೊಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದರು.

ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು ಎಂದಿರುವ ಶಿವರಾಜಕುಮಾರ್, ‘ನಾನು ಅವರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಆಮೇಲೆ ಏನಾಯ್ತು ಎಂದು ನನಗೆ ಗೊತ್ತಿಲ್ಲ. ಇಲ್ಲಿಗೆ ಬಂದಾಗ ದೊಡ್ಡ ಸುದ್ದಿಯಾಗಿತ್ತು. ಅದಾದ ಮೇಲೆ ಅವರು ಬೆಂಗಳೂರಿಗೆ ಬಂದಿದ್ದರು. ಆ ವಿಷಯವಾಗಿ ಇಲ್ಲೇ ಅವರನ್ನು ಕೇಳಬಹುದಿತ್ತು. ಆದರೆ, ಯಾಕೆ ಕೇಳಲಿಲ್ಲ ಎಂದು ನನಗೆ ಗೊತ್ತಿಲ್ಲ. ಕನ್ನಡ ಪ್ರೀತಿ ಅನ್ನೋದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು. ಅದು ಯಾವತ್ತೂ ಇರಬೇಕು. ಕನ್ನಡ ಯಾವತ್ತೂ ಹೃದಯದಲ್ಲಿರಬೇಕು. ಕನ್ನಡದ ಬಗ್ಗೆ ಬರೀ ಮಾತಾಡೋದಲ್ಲ ಅಥವಾ ಸುದ್ದಿಗಾಗಿ ಪೋಸ್‍ ಕೊಡೋದಷ್ಟೇ ಅಲ್ಲ, ನಾವು ಕನ್ನಡಕ್ಕಾಗಿ ಹೋರಾಡುತ್ತೇವೆ, ಕನ್ನಡಕ್ಕಾಗಿ ಸಾಯುತ್ತೇವೆ’ ಎಂದರು.

ಕನ್ನಡಕ್ಕೆ ಮೊದಲು ನಾವೇನು ಮಾಡುತ್ತೇವೆ ಎಂದು ಯೋಚಿಸಿ ಎಂದ ಶಿವರಾಜಕುಮಾರ್, ‘ಕನ್ನಡ ಸಿನಿಮಾಗೆ ನೀವೇನು ಮಾಡುತ್ತೀರಿ? ಬರೀ ಸ್ಟಾರ್ ಚಿತ್ರಗಳಿಗೆ ಮಾತ್ರ ಪ್ರೋತ್ಸಾಹ ಕೊಡೋದಷ್ಟೇ ಅಲ್ಲ. ಹೊಸಬರಿಗೂ ಪ್ರೋತ್ಸಾಹ ಕೊಡಬೇಕು. ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಹೊಸಬರಿಗೆ ಪ್ರೋತ್ಸಾಹ ಮಾಡದಿದ್ದರೆ, ಕನ್ನಡ ಹೇಗೆ ಬೆಳೆಯುತ್ತದೆ?’ ಎಂದು ಅವರು ಪ್ರಶ್ನಿಸಿದರು.

Tags:
error: Content is protected !!