ನಟ ಶಿವರಾಜಕುಮಾರ್ ಹೊಸ ವರ್ಷದ ಮೊದಲ ದಿನದಂದು ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು, ಇದೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಹಾಗಂತ ಅವರೇ ಘೋಷಿಸುವ ಮೂಲಕ ಮೂಲಕ ಅಭಿಮಾನಿಗಳಲ್ಲಿದ್ದ ಆತಂಕವನ್ನು ದೂರ ಮಾಡಿದ್ದಾರೆ.
ಈ ಸಂಬಂಧ ಹೊಸ ವರ್ಷದ ಮೊದಲ ದಿನ ವೀಡಿಯೋ ಬಿಡುಗಡೆ ಮಾಡಿರುವ ಅವರು, ‘ವೈದ್ಯರು ಕ್ಯಾನ್ಸರ್ ಮೂತ್ರಕೋಶವನ್ನು ತೆಗೆದಿದ್ದಾರೆ. ನಾನೀಗ ಕ್ಯಾನ್ಸರ್ ಫ್ರೀ. ಇನ್ನು ಕೆಲವು ತಿಂಗಳುಗಳಲ್ಲಿ ಮತ್ತೆ ನಿಮ್ಮ ಮುಂದೆ ಹಳೆಯ ಶಿವಣ್ಣನಾಗಿ ಬರಲಿದ್ದೇನೆ’ ಎಂದು ಘೋಷಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಶಿವರಾಜಕುಮಾರ್ ಅವರಿಗೆ ಡಿ. 24ರಂದು ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ತಮಿಳು ನಾಡು ಮೂಲದ ವೈದ್ಯ ಡಾ. ಮುರುಗೇಶನ್ ಮನೋಹರನ್ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ವೀಡಿಯೋ ಸಂದೇಶವೊಂದರಲ್ಲಿ ಮಾತನಾಡಿದ್ದ ಅವರು, ಶಿವರಾಜಕುಮಾರ್ ಚಿಕಿತ್ಸೆಗೆ ಸ್ಪಂದಿಸಿದ್ದಾರೆ, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದರು.
ಅದರಂತೆ ಶಿವರಾಜಕುಮಾರ್ ಕ್ರಮೇಣ ಗುಣಮುಖರಾಗುತ್ತಿದ್ದಾರೆ. ಹೊಸ ವರ್ಷದ ಮೊದಲ ದಿನ ಶಿವರಾಜಕುಮಾರ್ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುವುದರ ಜೊತೆಗೆ, ತಾವೀಗ ಕ್ಯಾನ್ಸರ್ ಮುಕ್ತ ಎಂದು ಹೇಳಿದ್ದಾರೆ. ಈ ವೀಡಿಯೋದಲ್ಲಿ ಅವರ ಪತ್ನಿ ಗೀತಾ ಶಿವರಾಜಕುಮಾರ್ ಸಹ ಇದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಎಲ್ಲರೂ ಕಿಡ್ನಿ ಕಸಿ ಮಾಡಿದ್ದಾರೆ ಅಂತೆಲ್ಲಾ ತಿಳಿದುಕೊಂಡಿದ್ದಾರೆ. ನನಗೆ ಯೂರಿನರಿ ಬ್ಲಾಡರ್ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಆಗಿದ್ದ ಮೂತ್ರಕೋಶ ತೆಗೆದಿದ್ದಾರೆ. ಈಗ ನಾನು ಆರೋಗ್ಯವಾಗಿದ್ದೇನೆ. ಎಲ್ಲರ ಹಾರೈಕೆ, ಪ್ರಾರ್ಥನೆಯನ್ನು ಯಾವತ್ತೂ ಮರೆಯುವುದಿಲ್ಲ. ಎಲ್ಲರಿಗೂ ಹೊಸ ವರ್ಷದ ಶಭಾಶಯಗಳು’ ಎಂದು ಹಾರೈಸಿದ್ದಾರೆ.
ಮಾರ್ಚ್ ತಿಂಗಳ ನಂತರ ಮತ್ತದೆ ಉತ್ಸಾಹದಿಂದ ಬರುವುದಾಗಿ ಹೇಳಿದ ಶಿವರಾಜಕುಮಾರ್, ‘ಮೊದಲ ಒಂದು ತಿಂಗಳು ಸ್ವಲ್ಪ ನಿಧಾನ ಎಂದು ವೈದ್ಯರು ಹೇಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಎಂದಿನ ಹಾಗೆ ಕಾರ್ಯನಿರ್ವಹಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಮತ್ತೆ ಮೊದಲಿನ ತರಹ ಆಗಬಹುದು ಎಂದು ಹೇಳಿದ್ದಾರೆ. ಜನವರಿ 26ರಂದು ಭಾರತಕ್ಕೆ ವಾಪಸ್ಸಾಗಲಿದ್ದೇನೆ’ ಎಂದು ಶಿವರಾಜಕುಮಾರ್ ಹೇಳಿದ್ದಾರೆ.





