ಶಿವರಾಜಕುಮಾರ್ ಅಭಿನಯದ ‘ಶಿವಣ್ಣ 131’ ಚಿತ್ರದ ಚಿತ್ರೀಕರಣ ಎಚ್.ಎಂ.ಟಿ. ಫ್ಯಾಕ್ಟರಿಯಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಅವರನ್ನು ನಟ ಯಶ್ ಭೇಟಿ ಮಾಡಿ, ಉಭಯಕುಶಲೋಪರಿ ನಡೆಸಿದ್ದಾರೆ.
ಯಶ್ ಮತ್ತು ಶಿವಣ್ಣ ಭೇಟಿಯಾಗದೆ ಹಲವು ದಿನಗಳೇ ಆಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಅವರಿಬ್ಬರೂ ಭೇಟಿ ಮಾಡಿದ್ದು, ವೇದಿಕೆ ಹಂಚಿಕೊಂಡಿರಲಿಲ್ಲ. ಸೋಮವಾರ ಅದಕ್ಕೆ ಮುಹೂರ್ತ ಕೂಡಿಬಂದಿದೆ.
ಶಿವಣ್ಣ ಅಭಿನಯದ ‘ಶಿವಣ್ಣ 131’ ಚಿತ್ರದ ಮೊದಲ ಹಂತದ ಚಿತ್ರೀಕರಣ ಇದೀಗ ಎಚ್.ಎಂ.ಟಿ. ಫ್ಯಾಕ್ಟರಿಯಲ್ಲಿ ನಡೆಯುತ್ತಿದೆ. ಅಲ್ಲಿ ಚಿತ್ರಕ್ಕೆಂದೇ ವಿಶೇಷವಾದ ಸೆಟ್ ನಿರ್ಮಿಸಲಾಗಿದೆ. ಇನ್ನು, ‘ಟಾಕ್ಸಿಕ್’ ಚಿತ್ರಕ್ಕೂ ಅಲ್ಲೇ ಪಕ್ಕದಲ್ಲಿ ಸೆಟ್‍ಗಳನ್ನು ಹಾಕಲಾಗಿದ್ದು, ಅಲ್ಲಿ ಕೆಲವು ದಿನಗಳಿಂದ ಯಶ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೀಗೆ ಚಿತ್ರೀಕರಣದಲ್ಲಿ ಸ್ವಲ್ಪ ಸಮಯ ಬಿಡುವಿದ್ದಾಗ, ಶಿವರಾಜಕುಮಾರ್ ಅವರನ್ನು ಯಶ್ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ತಮ್ಮ ಚಿತ್ರಗಳು ಮತ್ತು ಮುಂದಿನ ಯೋಜನೆಗಳ ಕುರಿತು ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
‘ಶಿವಣ್ಣ 131’ ಚಿತ್ರವನ್ನು ಭುವನೇಶ್ವರಿ ಪ್ರೊಡಕ್ಷನ್ ಬ್ಯಾನರ್‍ನಡಿ ಎಸ್.ಎನ್. ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಒಂದು ತಮಿಳು ಚಿತ್ರ ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.
‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ.