ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ ಬಿ. ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ‘45’ ಚಿತ್ರದ ಚಿತ್ರೀಕರಣ ಇದೀಗ ಸಂಪೂರ್ಣವಾಗಿದೆ ಕಳೆದ ವರ್ಷ ಜುಲೈನಲ್ಲಿ ಪ್ರಾರಂಭವಾದ ರಮೇಶ್ ರೆಡ್ಡಿ ನಿರ್ಮಾಣದ ಮತ್ತು ಅರ್ಜುನ್ ಜನ್ಯ ನಿರ್ದೇಶನದ ಈ ಚಿತ್ರವು ಹಲವು ಹಂತಗಳ ಚಿತ್ರೀಕರಣ ಮುಗಿಸಿ ಇದೀಗ ಕುಂಬಳಕಾಯಿ ಒಡೆಯಲಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ಶಿವರಾಜಕುಮಾರ್, ‘ಇದೇ ಮೊದಲ ಬಾರಿಗೆ ನಾವು ಮೂವರು ಒಟ್ಟಿಗೆ ನಟಿಸಿದ್ದೇವೆ. ಎಲ್ಲರೂ ಸಮನಾದ ಪಾತ್ರಗಳಿವೆ. ಉಪೇಂದ್ರ ಅವರ ಜೊತೆ ನಟಿಸುವುದಕ್ಕೆ ನಾನು ಯಾವಾಗಲೂ ಸಿದ್ಧ. ರಾಜ್ ಬಿ. ಶೆಟ್ಟಿ ಜೊತೆ ಇದೆ ಮೊದಲ ಬಾರಿಗೆ ನಟಿಸಿದ್ದೇನೆ. ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ. ಹಾಗಂತ ಅವರ ಕೆಲಸ ನೋಡಿ ಅನಿಸುವುದಿಲ್ಲ. ಅಷ್ಟು ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂತಹ ಒಂದು ಆಕ್ಷನ್ ಚಿತ್ರವಾಗಲಿದೆ’ ಎಂದರು
ಅರ್ಜುನ್ ಜನ್ಯ ಅವರ ನಿರ್ದೇಶನ ಶೈಲಿ ನೋಡಿ ಉಪೇಂದ್ರ ಸಹ ಬಹಳ ಖುಷಿಯಾಗಿದ್ದಾರೆ. ‘ಅನಿಮೇಶನ್ ಮೂಲಕ ಕಥೆ ಹೇಳುವುದನ್ನು ಹಾಲಿವುಡ್ ನಲ್ಲಿ ಮಾಡ್ತಾರೆ ಎಂದು ಕೇಳಿದ್ದೆ. ಕನ್ನಡದಲ್ಲಿ ಮೊದಲ ಬಾರಿಗೆ ಅದನ್ನು ಮಾಡಿ ತೋರಿಸಿದ್ದಾರೆ. ಅನಿಮೇಶನ್ ನಲ್ಲಿ ಅವರು ಏನು ತೋರಿಸಿದರೋ, ಚಿತ್ರ ಸಹ ಅದೇ ರೀತಿ ಮೂಡಿ ಬಂದಿದೆ. ಶಿವಣ್ಣ ಮತ್ತು ರಾಜ್ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಬಹಳ ಸಂತೋಷವಾಗಿದೆ’ ಎಂದರು
ಶಿವರಾಜಕುಮಾರ್, ಉಪೇಂದ್ರ, ರಾಜೇಶ್ ಬಿ ಶೆಟ್ಟಿಯವರನ್ನು ಬ್ರಹ್ಮ ವಿಷ್ಣು ಮಹೇಶ್ವರರಿಗೆ ಹೋಲಿಸುತ್ತಾರೆ ಅರ್ಜುನ್ ಜನ್ಯ. ‘ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರರಿದ್ದ ಹಾಗೆ. ರಮೇಶ್ ರೆಡ್ಡಿ ಈ ಮೂವರನ್ನು ಇಟ್ಟುಕೊಂಡು ಒಂದು ದೇವಸ್ಥಾನ ಕಟ್ಟಿಸಿದ್ದಾರೆ. ಸತ್ಯ ಹೆಗಡೆ ಈ ದೇವಸ್ಥಾನದ ಪ್ರಧಾನ ಅರ್ಚಕರು. ಇವರೆಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ ಮುಂದೆ ಗ್ರಾಫಿಕ್ಸ್ ಕೆಲಸ ಪ್ರಾರಂಭವಾಗಲಿದೆ. ಚಿತ್ರ ಮುಗಿದ ಮೇಲೆ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುವುದು’ ಎಂದು ಹೇಳಿದರು
‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ನಡಿ ಉಮಾ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ, ರವಿವರ್ಮ ಸಾಹಸ ಇದೆ. ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಕೌಸ್ತುಭ ಮಣಿ ಮುಂತಾದವರು ನಟಿಸಿದ್ದಾರೆ





