ನಟ ಹಾಗೂ ‘ಬಿಗ್ ಬಾಸ್’ ವಿಜೇತ ಶೈನ್ ಶೆಟ್ಟಿ, ನಟನೆಗಿಂತ ಹೆಚ್ಚಾಗಿ ತಮ್ಮ ಗಲ್ಲಿ ಕಿಚನ್‍ನಿಂದಲೂ ಗುರುತಿಸಿಕೊಂಡವರು. ಮೊದಲು ಬನಶಂಕರಿ ಬಿ.ಡಿ.ಎ. ಕಾಂಪ್ಲೆಕ್ಸ್ ಬಳಿ ‘ಗಲ್ಲಿ ಕಿಚನ್’ ಎಂಬ ವಾಹನದಲ್ಲಿ ದೋಸೆ ಕ್ಯಾಂಪ್ ಶುರು ಮಾಡಿದ ಶೈನ್, ನಂತರ ಬನಶಂಕರಿ ಮತ್ತು ರಾಜರಾಜೇಶ್ವರಿ ನಗರಗಳಲ್ಲಿ ಅದೇ ಹೆಸರಿನ ಹೋಟೆಲ್‍ಗಳನ್ನು ಪ್ರಾರಂಭಿಸಿದರು. ಈಗ ಅವರು ಅದರಿಂದ ದೂರವಾಗುವುದಕ್ಕೆ ಮುಂದಾಗಿದ್ದಾರೆ.
ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಒಂದು ಪತ್ರ ಶೇರ್ ಮಾಡಿರುವ ಅವರು, ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಹೊಸದೊಂದು ಪ್ರಯಾಣ ಶುರು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏನದು ಹೊಸ ಪ್ರಯಾಣ ಎಂದು ಶೈನ್ ಹೇಳಿಲ್ಲ. ತಮ್ಮ ಹೊಸ ಪ್ರಯತ್ನಕ್ಕೆ ಅವರು ಎಲ್ಲರ ಸಹಕಾರ, ಬೆಂಬಲ ಕೋರಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ‘ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವನ ತೋರ್ಸಿ ನಮ್ಮ ವ್ಯಕ್ತಿತ್ವನ ಎತ್ತಿ ಹಿಡಿಯುತ್ತೆ ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್. ಜೀವನ ಸಾಗ್ಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್, ನೀವೆಲ್ಲಾ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್‍ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ಆದ್ರೆ ಬೆಳೀತಾ, ಬೆಳಸ್ತಾ ಮುಂದಕ್ಕೆ ಸಾಗೋದೆ ಜೀವನ ಅಲ್ವಾ. So, ಮುಂದೊಂದಿಷ್ಟು ಕೆಲಸ ಮಾಡೋದ್ ಇದೆ. ಅದಕ್ಕಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ 6 ವರ್ಷಗಳ ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ ಹೇಳೋ ಸಮಯ. ವಿದಾಯ ಹೇಳೋದು ಇಲ್ಲಿ ಬರದಷ್ಟು ಸುಲಭ ಅಲ್ಲ ಅಂತ ನಿಮ್ಗೂ ಗೊತ್ತು. ಆದ್ರೆ, ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂದ್ಕೊಂಡು ಹೋಗೋದು ಅನಿವಾರ್ಯ.
ಗಲ್ಲಿ ಕಿಚನ್ನನ ನನ್ನಂತೆ ಆಸಕ್ತಿ ಇರೋ ಯುವ ಪ್ರತಿಭೆಗೆ ಹಸ್ತಾಂತ್ರ ಮಾಡಿದೀನಿ. ಈ ಕನಸಿಗೆ ಹೊತ್ತಿದ್ದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ ಹೊಸ ರೀತಿಯಲ್ಲಿ ಮುಂದುವರಿಯಲಿದೆ. ಶ್ರದ್ಧೆಯಿಂದ ಜನರ ಪ್ರೀತಿನ ಉಳಸ್ಕೊಂಡು ಬೆಳಸ್ಕೊಂಡು ಹೋಗ್ಲಿ ಅಂತ ಆಶಿಸ್ತೀನಿ.
ತಿಂದುಂಡು ಹೊಗಳಿದ, ತಪ್ಪಿದ್ದಲ್ಲಿ ತಿದ್ದಿದ ನನ್ನೆಲ್ಲ ಅಭಿಮಾನಿಗಳೇ, ಭೋಜನ ಪ್ರಿಯರೇ, ಗಲ್ಲಿ ಕಿಚನ್ ಕುಟುಂಬಸ್ಥರೆ, ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ. ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ’ ಎಂದು ಶೈನ್ ಪತ್ರ ಮುಗಿಸಿದ್ದಾರೆ.
ಶೈನ್ ಸದ್ಯ ‘ಮರ್ಯಾದೆ ಪ್ರಶ್ನೆ’ ಮತ್ತು ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಎಂಬ ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.