ಸಖತ್ ಸ್ಟುಡಿಯೋಸ್‍ನಡಿ ಆರ್.ಜೆ. ಪ್ರದೀಪ ನಿರ್ಮಿಸಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರವು ನವೆಂಬರ್ 22ರಂದು ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಅದಕ್ಕೂ ಮೊದಲು ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಈ ಮೊದಲ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದು, ನಟ ಶರಣ್ ಹಾಡಿದ್ದಾರೆ. ಅರ್ಜುನ್ ರಾಮು ಈ ಹಾಡನ್ನು ಜಾನಪದ ಶೈಲಿಯಲ್ಲಿ ಸಂಯೋಜಿಸಿದ್ದಾರೆ. ಈ ಹಾಡಿನಲ್ಲಿ ನಟರ ಪಾತ್ರದ ಪರಿಚಯದ ಜೊತೆಗೆ ಮಧ್ಯಮ ವರ್ಗದ ಸಮಾಜವನ್ನು ಪರಿಚಯಿಸಲಾಗುತ್ತದೆ. ಈ ಹಾಡು ಸಕ್ಕತ್ ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದ್ದು, ಹಾಡಿಗೆ ಒಳ್ಳೆಯ ಪ್ರತಿಕ್ರಿಯೆಗಳು ಸಿಗುತ್ತಿವೆ.
ಈ ಹಿಂದೆ, ಸಂಚಾರಿ ವಿಜಯ್ ಅಭಿನಯದ ‘ಪುಕ್ಸಟ್ಟೆ ಲೈಫು’ ಚಿತ್ರವನ್ನು ನಿರ್ದೇಶನ ಮಾಡಿದ್ದ ನಾಗರಾಜ ಸೋಮಯಾಜಿ, ‘ಮರ್ಯಾದೆ ಪ್ರಶ್ನೆ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪಾತ್ರಗಳನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆಯಾಗಿದ್ದು, ರಾಕೇಶ್ ಅಡಿಗ ಕಾರ್ಯಕರ್ತನಾಗಿ, ಸುನಿಲ್ ರಾವ್ ಡೆಲಿವರಿ ಬಾಯ್ ಆಗಿ, ಪೂರ್ಣಚಂದ್ರ ಮೈಸೂರು ಕ್ಯಾಬ್ ಡ್ರೈವರ್ ಆಗಿ, ತೇಜು ಬೆಳ್ವಾಡಿ ಸೇಲ್ಸ್ ಗರ್ಲ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಮರ್ಯಾದೆ ಪ್ರಶ್ನೆ’ ಚಿತ್ರದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು, ಟಿ.ಎಸ್. ನಾಗಭರಣ, ಶ್ವೇತಾ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ಮಂಜು ಪಾವಗಡ, ದಯಾಳ್ ಪದ್ಮನಾಭನ್, ರೇಖಾ ಕೂಡ್ಲಿಗಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನು ಸಖತ್ ಸ್ಟುಡಿಯೋದಡಿ ಶ್ವೇತಾ ಆರ್ ಪ್ರಸಾದ್ ಮತ್ತು ವಿದ್ಯಾ ಗಾಂಧಿ ರಾಜನ್ ನಿರ್ಮಿಸಿದ್ದು, ಸಂದೀಪ್ ವಳ್ಳೂರಿ ಅವರ ಛಾಯಾಗ್ರಹಣ ಮತ್ತು ಅರ್ಜುನ್ ರಾಮು ಸಂಗೀತ ಈ ಚಿತ್ರಕ್ಕಿದೆ.