ರಮೇಶ್ ಅರವಿಂದ್ ಮತ್ತು ಗಣೇಶ್ ಒಟ್ಟಿಗೆ ನಟಿಸುತ್ತಾರೆ ಎಂಬುದು ಕಳೆದ ವರ್ಷದ ಸುದ್ದಿ. ‘ಇನ್‍ಸ್ಪೆಕ್ಟರ್ ವಿಕ್ರಂ’, ‘ಮಾನ್ಸೂನ್ ರಾಗ’, ‘ರಂಗನಾಯಕ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ವಿಖ್ಯಾತ್, ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ರಮೇಶ್ ಮತ್ತು ಗಣೇಶ್ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ ಎಂಬುದು ಸುದ್ದಿಯಾಗಿತ್ತು. ಆದರೆ, ಯಾವಾಗ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ.
ಈಗ ಕೊನೆಗೂ ಉತ್ತರ ಸಿಕ್ಕಿದೆ. ಗೌರಿ ಹಬ್ಬದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಚಿತ್ರದ ಮುಹೂರ್ತವಾಗಿದೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಎಂಬ ಹೆಸರನ್ನು ಇಡಲಾಗಿದೆ. ಅಂದ ಹಾಗೆ, ಈ ಚಿತ್ರವನ್ನು ರಾಯಲ ಪಿಕ್ಚರ್ಸ್ ಸಂಸ್ಥೆಯಡಿ ಸತ್ಯ ರಾಯಲ ನಿರ್ಮಿಸುತ್ತಿದ್ದು, ವಿಖ್ಯಾತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಮುಹೂರ್ತ ಮತ್ತು ಟೀಸರ್ ಬಿಡುಗಡೆ ನಂತರ ಮಾತನಾಡಿದ ರಮೇಶ್, ‘ವಿಖ್ಯಾತ್ ಪರಿಚಯ ಆಗಿದ್ದು ಒಂಬತ್ತು ವರ್ಷಗಳ ಹಿಂದೆ. ‘ಪುಷ್ಪಕ ವಿಮಾನ’ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ ಇವನಿಗೆ ಇರುವ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್‍ಗಳಲ್ಲಿ ಆ ಸೂಕ್ಷ್ಮತೆಯನ್ನು ಗಮನಿಸಬಹುದು. ಇದು ನಿಮ್ಮ ಮೊದಲ ಪಯಣ. ಸತ್ಯ ಮತ್ತು ವಿಖ್ಯಾತ್ ಇಬ್ಬರಲ್ಲೂ ಬಹಳ ಉತ್ಸಾಹವಿದೆ’ ಎಂದರು.
ಗಣೇಶ್ ಮಾತನಾಡಿ, ‘ಈ ಟೀಸರ್ ನೋಡಿದರೆ ಬೇರೆ ರೀತಿ ಫೀಲ್ ಇದೆ. ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ ಇಲ್ಲಿದೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ದೃಶ್ಯ ಒಂದು ಹೊಸ ಅನುಭವ ಕೊಡುತ್ತದೆ’ ಎಂದರು.
‘Your’s Sincerely ರಾಮ್ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತವಿದ್ದು, ಆನಂದ್ ಆಡಿಯೊದಲ್ಲಿ ಟೀಸರ್ ಬಿಡುಗಡೆ ಆಗಿದೆ.