ಎರಡೂವರೆ ವರ್ಷಗಳ ಹಿಂದೆ ‘ದಿ ರೈಸ್ ಆಫ್ ಅಶೋಕ’ (ಮೊದಲ ಹೆಸರು ‘ಅಶೋಕ ಬ್ಲೇಡ್’) ಚಿತ್ರದ ಮುಹೂರ್ತವಾದಾಗ, ಕಾವ್ಯ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು, ಚಿತ್ರತಂಡಕ್ಕೆ ಸಪ್ತಮಿ ಗೌಡ ಬಂದಿದ್ದಾರೆ. ಕಾವ್ಯ ಜಾಗಕ್ಕೆ ಸಪ್ತಮಿ ಬಂದಿದ್ದಾರಾ ಅಥವಾ ಚಿತ್ರದಲ್ಲಿ ಇಬ್ಬರೂ ಇರುತ್ತಾರಾ ಎಂಬ ಪ್ರಶ್ನೆಗೆ ಚಿತ್ರತಂಡ ಇನ್ನಷ್ಟೇ ಉತ್ತರಿಸಬೇಕು.
ಕಳೆದ ವರ್ಷ ಬಿಡುಗಡೆಯಾದ ಯುವ ರಾಜಕುಮಾರ್ ಅಭಿನಯದ ‘ಯುವ’ ಚಿತ್ರದ ನಂತರ ಸಪ್ತಮಿ ಗೌಡ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಇದೀಗ ಅವರು ಸತೀಶ್ ನೀನಾಸಂ ಅಭಿನಯದ ‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕೆ ನಾಯಕಿಯಾಗಿ ಸೇರ್ಪಡೆಯಾಗಿದ್ದು, ಈ ಚಿತ್ರದಲ್ಲಿ ಅಂಬಿಕಾ ಎಂಬ ಪಾತ್ರದಲ್ಲಿ ಸಪ್ತಮಿ ನಟಿಸುತ್ತಿದ್ದಾರೆ. ಸಪ್ತಮಿ ಅವರ ಮೊದಲ ಪೋಸ್ಟರ್ ಭಾನುವಾರ ಬಿಡುಗಡೆ ಆಗಿದೆ. ಸೈಕಲ್ ಮೇಲೆ ಹೂವಿನ ಬುಟ್ಟಿ ಹೊತ್ತಿರುವ ಹಳ್ಳಿ ಹುಡುಗಿಯಾಗಿ ಸಪ್ತಮಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೂಲಕ ಒಂದು ಬಂಡಾಯದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಕಥೆಗಾರ ಟಿ.ಕೆ. ದಯಾನಂದ್. ಈ ಚಿತ್ರವು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಮತ್ತು ನೀನಾಸಂ ಸತೀಶ್, ‘ರೈಸ್ ಆಫ್ ಅಶೋಕ’ ಚಿತ್ರವನ್ನು ಸೇರಿ ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರದ ಚಿತ್ರೀಕರಣ ಶೇ.80ರಷ್ಟು ಚಿತ್ರೀಕರಣ ಮುಗಿದಿದ್ದು, ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಇದೀಗ ಚೆನ್ನಪಟ್ಟಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಮುಕ್ತಾಯವಾಗಲಿದೆ.
‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ಸತೀಶ್ ನೀನಾಸಂ, ಸಪ್ತಮಿ ಗೌಡ, ಬಿ. ಸುರೇಶ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ಈ ಚಿತ್ರವನ್ನು ವಿನೋದ್ ದೋಂಡಾಳೆ ಬಹುತೇಕ ನಿರ್ದೇಶನ ಮಾಡಿದ್ದು, ಅವರ ನಿಧನದ ನಂತರ ಬಾಕಿ ಉಳಿದಿರುವ ಚಿತ್ರವನ್ನು ಮನು ಶೇಡ್ಗಾರ್ ನಿರ್ದೇಶಕರಾಗಿ ಮುಂದುವರೆಸುತ್ತಿದ್ದಾರೆ.





