ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವರು ಮಹಿಳೆಯರು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ಸಾನ್ವಿಕಾ ಹೊಸದಾಗಿ ಸೇರ್ಪಡೆಯಾಗಿದೆ. ಮೂಲತಃ ಕೇರಳದವರಾದ ಸಾನ್ವಿಕಾ, ಕನ್ನಡದಲ್ಲಿ ತಮ್ಮ ಮೊದಲ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದೇ ‘ಜಾವಾ ಕಾಫಿ’. ಈ ಚಚಿತ್ರ ಸಂಪೂರ್ಣವಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
‘ಜಾವಾ ಕಾಫಿ’ ಚಿತ್ರಕ್ಕೆ ಸಾನ್ವಿಕಾ ಬರೀ ನಿರ್ದೇಶಕಿಯಷ್ಟೇ ಅಲ್ಲ. ನಾಯಕಿಯೂ ಅವರೇ. ನಿರ್ಮಾಪಕಿಯೂ ಅವರೇ. ಕಥೆ-ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಸಾಹಸ ಸಂಯೋಜನೆಯನ್ನೂ ಮಾಡಿದ್ದಾರೆ. ಒಟ್‍ಟಾರೆ, ತಮ್ಮ ಮೊದಲ ಚಿತ್ರದಲ್ಲೇ ಒಂಬತ್ತು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಅಜಯ್ ವರ್ಧನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ.
‘ಜಾವ ಕಾಫಿ’ ಚಿತ್ರ ತಮ್ಮ ಕನಸು ಹಾಗೂ ಮನಸ್ಸು ಎನ್ನುವ ಸಾನವಿಕಾ, ‘ಚಿತ್ರ ನಿರ್ದೇಶನ ಮಾಡಬೇಕೆಂಬುದು ನನ್ನ 15 ವರ್ಷಗಳ ಕನಸು. ಈಗ ಅದು ನನಸಾಗಿದೆ. ನಾನು ಕೇರಳದವಳಾಗಿದರೂ ನನ್ನ ಮೊದಲ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದೇನೆ. ನಿರ್ದೇಶಕಿ, ನಿರ್ಮಾಪಕಿ, ನಾಯಕಿ, ಕಥೆ, ಚಿತ್ರಕಥೆ, ಸಾಹಸ ನಿರ್ದೇಶನ ಸೇರಿದಂತೆ ಈ ಚಿತ್ರದ ಒಂಭತ್ತು ಆಯಾಮಗಳಲ್ಲಿ ಕೆಲಸ ಮಾಡಿದ್ದೇನೆ. ಕನ್ನಡದಲ್ಲಿ ನಿರ್ದೇಶನ ಮಾಡಲು ನನಗೆ ಅಸೋಸಿಯೇಟ್ ಡೈರೆಕ್ಟರ್ ವಸಂತ್ ಸಹಾಯ ಮಾಡಿದರು’ ಎಂದರು.
‘ಜಾವ ಕಾಫಿ’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎನ್ನುವ ಸಾನ್ವಿಕಾ, ‘ಬೆಂಗಳೂರು, ಮಂಗಳೂರು, ಕೇರಳ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರದ ಮೊದಲ ಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಆನಂತರ ಬಿಡುಗಡೆ ದಿನಾಂಕ ತಿಳಿಸುತ್ತೇವೆ. ಮೊದಲು ಕನ್ನಡದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಆನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡುತ್ತೇವೆ’ ಎಂದರು.
ಇದನ್ನೂ ಓದಿ:- ಚಿತ್ರೀಕರಣ ಸ್ಥಳದಲ್ಲಿ ಕಪಿಲ್ ಸಾವು ಸಂಭವಿಸಿಲ್ಲ; ಹೊಂಬಾಳೆ ಫಿಲಂಸ್ ಸ್ಪಷ್ಟನೆ
ಈಗಾಗಲೇ ತುಳು ಚಿತ್ರದಲ್ಲಿ ನಟಿಸಿರುವ ಅಜಯ್ ವರ್ಧನ್‍ಗೆ ಇದು ಮೂರನೇ ಚಿತ್ರವಂತೆ. ‘ಸಾನ್ವಿಕಾ ಅವರು ಒಂದೊಳ್ಳೆಯ ಚಿತ್ರ ಮಾಡಿದ್ದಾರೆ. ನಾನು ಪತ್ರಕರ್ತನ ಪಾತ್ರ ಮಾಡಿದ್ದೇನೆ’ ಎಂದರು.
‘ಜಾವಾ ಕಾಫಿ’ ಚಿತ್ರದಲ್ಲಿ ಸಾನ್ವಿಕಾ ಮತ್ತು ಅಜಯ್ ವರ್ಧನ್ ಜೊತೆಗೆ ಮಂಜುನಾಥ್, ಪ್ರತಿಮ, ಭವಾನಿ ಶಂಕರ್, ವಿಜಯ್ ಕುಮಾರ್, ರಾಮಚಂದ್ರ, ರಾಮಲಿಂಗಪ್ಪ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಧರ್ ಕರ್ಕೇರ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ 18 ವಯಸ್ಸಿನ ಯುವಕ ಧ್ರುವ ದೇವರಾಯನ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.





