‘ಬಿಗ್ ಬಾಸ್’ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಹಾಗೂ ಕನ್ನಡ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀಮುರಳಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಇದು ರೂಪೇಶ್ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರವಾಗಿದ್ದು, ಇದಕ್ಕೂ ಮೊದಲು ‘ಗಿರ್ಗಿಟ್’ ಮತ್ತು ‘ಸರ್ಕಸ್’ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಇದು ಕರಾವಳಿ ಭಾಗದ ರಾಜಕೀಯದ ಕುರಿತಾದ ಚಿತ್ರ. ಇದು ತುಳು ಭಾಷೆಯಲ್ಲಿ ಸಿದ್ಧವಾಗಿದ್ದು, ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.
ಈ ಹಿಂದೆ ಕನ್ನಡದ ‘ಪೈಲ್ವಾನ್’ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಸುನೀಲ್ ಶೆ್ಟ್ಟಿ, ಈ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೂಲತಃ ತುಳು ಭಾಷೆಯವರಾದ ಸುನೀಲ್ ಶೆಟ್ಟಿ, ಇಷ್ಟು ವರ್ಷಗಳಲ್ಲಿ ತುಳು ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರು ತುಳು ಚಿತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ತಮ್ಮ ಭಾಷೆಯ ಅಭಿಮಾನದಿಂದ ಒಂದು ರೂಪಾಯಿಯನ್ನು ಪಡೆಯದೆ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರು ಸುಮಾರು 18 ನಿಮಿಷಗಳ ಕಾಲ ತೆರೆಯ ಮೇಲೆ ಕಾಣಿಸಿಕೊಳ‍್ಳುತ್ತಾರಂತೆ.
ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ನಿರ್ಮಿಸಿರುವ ‘ಜೈ’ ಚಿತ್ರದಲ್ಲಿ ರೂಪೇಶ್‍ಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಮಿಕ್ಕಂತೆ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಮುಂತಾದವರು ನಟಿಸಿದ್ದಾರೆ.
‘ಜೈ’ ಚಿತ್ರಕ್ಕೆ ವಿನುತ್ ಛಾಯಾಗ್ರಹಣ, ಲೊಯ್ ವೆಲೆಂಟಿನ್ ಸಲ್ದಾನ ಸಂಗೀತವಿದ್ದು, ನವೆಂಬರ್.14ರಂದು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಾಲಕ್ಕೆ ತೆರೆಯ ಮೇಲೆ ಬರಲಿದೆ.





