ಕಿರಣ್ ರಾಜ್ ಅಭಿನಯದ ಮತ್ತು ಗುರುತೇಜ್ ಶೆಟ್ಟಿ ನಿರ್ದೇಶನದ ‘ರಾನಿ’ ಚಿತ್ರವು ಸೆಪ್ಟೆಂಬರ್ 12ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ಚಿತ್ರದ ನಿರ್ದೇಶಕ ಗುರುತೇಜ್ ಶೆಟ್ಟಿ, ನಿರ್ಮಾಪಕರಾದ ಚಂದ್ರಕಾಂತ ಪೂಜಾರಿ ಮತ್ತು ಉಮೇಶ್ ಹೆಗ್ಡೆ ಅವರಲ್ಲಿ ನಿರ್ದೇಶಕ ಗುರುತೇಜ್ ಶೆಟ್ಟಿ ಕ್ಷಮೆ ಕೇಳಿದ್ದಾರೆ.
ಇತ್ತೀಚೆಗೆ ‘ರಾನಿ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಸಮಾರಂಭ ನಡೆಯಿತು. ಅದಕ್ಕೂ ಮುನ್ನ ಕಳೆದ ವಾರ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಎರಡೂ ಸಮಾರಂಭಗಳನ್ನು ದೊಡ್ಡದಾಗಿ ಮಾಡಬೇಕು, ದೊಡ್ಡ ನಟ-ತಂತ್ರಜ್ಞರನ್ನು ಕರೆಸಬೇಕು ಎಂದು ಚಿತ್ರತಂಡ ಪ್ಲಾನ್ ಯೋಚಿಸಿತ್ತಂತೆ. ಆದರೆ, ದೊಡ್ಡವರ್ಯಾರೂ ಬರದೆ, ಯೂಟ್ಯೂಬ್‍ನಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇನ್ನು, ಹಾಡು ಬಿಡುಗಡೆ ಸಮಾರಂಭದಲ್ಲೂ ಅದು ಮುಂದುವರೆದಿದೆ. ಯಾರೂ ಸಿಗದೆ ಕೊನೆಗೆ ಚಿತ್ರಕ್ಕೆ ಕಥೆ ಬರೆದಿರುವ ಜೆ.ಕೆ. ಭಾರವಿ ಅವರಿಂದ ಹಾಡು ಬಿಡುಗಡೆ ಮಾಡಿಸಲಾಗಿದೆ.
ಈ ಕುರಿತು ಮಾತನಾಡಿದ ಗುರುತೇಜ್ ಶೆಟ್ಟಿ, ‘ಟ್ರೇಲರ್ ಬಿಡುಗಡೆಯನ್ನು ದೊಡ್ಡದಾಗಿ ಮಾಡಬೇಕು, ದೊಡ್ಡವರನ್ನು ಕರೆಸಿ ಬಿಡುಗಡೆ ಮಾಡಬೇಕು ಎಂಬ ಆಸೆ ಇತ್ತು. ಅದು ಸಾಧ್ಯವಾಗಲೇ ಇಲ್ಲ. ಈ ಕುರಿತು ಹಲವು ದೊಡ್ಡ ನಟರನ್ನು ಕೇಳಿದ್ದೇವೆ. ಒಬ್ಬೊಬ್ಬರು ಒಂದೊಂದು ಕಾರಣ ಹೇಳಿದರು. ಬಹುಶಃ ಅವರೆಲ್ಲರೂ ಬ್ಯುಸಿ ಇರಬಹುದು. ಮಾಧ್ಯಮದವರು ಬಿಟ್ಟರೆ ನಮ್ಮ ಜೊತೆಗೆ ಯಾರೂ ಇಲ್ಲ. ಹಾಗಂತ ಯಾರಿಗೂ ಬಕೆಟ್ ಹಿಡಿಯುವುದಕ್ಕೆ ನನಗೆ ಸಾಧ್ಯವಿಲ್ಲ. ನಾನು ಸ್ವಾಭಿಮಾನಿ. ನಿರ್ಮಾಪಕರು ಹೊಸಬರು. ಯಾರೂ ಬರದಿದ್ದಾಗ ಅವರಿಗೆ ಸಹಜವಾಗಿಯೇ ಆತಂಕ ಕಾಡುತ್ತದೆ. ಚಿತ್ರದ ಸಮಾರಂಭಕ್ಕೆ ಸಾಧ್ಯವಾದರೆ ದೊಡ್ಡವರನ್ನು ಕರೆಸುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ಆ ಭರವಸೆ ಈಡೇರಿಸದೇ ಇದ್ದಿದ್ದಕ್ಕೆ ಕ್ಷಮೆ ಕೇಳುತ್ತೇನೆ’ ಎಂದು ಕ್ಷಮೆ ಕೇಳಿದರು.
ಇನ್ನು, ‘ರಾನಿ’ ಚಿತ್ರದಲ್ಲಿ ನಟಿಸಿರುವ ರವಿಶಂಕರ್, ‘ಮಠ’ ಗುರುಪ್ರಸಾದ್ ಮುಂತಾದವರು ಸಹ ಚಿತ್ರದ ಯಾವುದೇ ಸಮಾರಂಭಕ್ಕೂ ಬಂದಿಲ್ಲ. ಈ ಕುರಿತು ಕೇಳಲಾಗಿ, ‘ಅವರಿಗೆ ಫೋನ್ ಮಾಡಿದ್ದೆವು. ಆದರೆ, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಬಹುಶಃ ಸ್ಟಾರ್ ನಿರ್ಮಾಪಕರು ಅಥವಾ ನಟರಿದ್ದರೆ ಬಂದಿರುತ್ತಿದ್ದರೇನೋ? ಯಾರೂ ಬರದಿದ್ದರೇನು? ಜನ ಬರುತ್ತಾರೆ, ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ನಾವೇನು ಕಾಟಾಚಾರಕ್ಕೆ ಸಿನಿಮಾ ಮಾಡಿಲ್ಲ. ನಿಜಕ್ಕೂ ಚೆನ್ನಾಗಿ ಬಂದಿದೆ’ ಎಂದರು.
‘ರಾನಿ’ ಚಿತ್ರವು ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಈ ಚಿತ್ರದಲ್ಲಿ ಕಿರಣ್ ರಾಜ್ ಜೊತೆಗೆ ಸಮೀಕ್ಷಾ, ಅಪೂರ್ವ, ರಾಧ್ಯ, ರವಿಶಂಕರ್, ಮೈಕೋ ನಾಗರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಮತ್ತು ಮಣಿಕಾಂತ್ ಕದ್ರಿ ಸಂಗೀತವಿದೆ.