Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮಾರ್ನಮಿಯಲ್ಲಿ ರಿತ್ವಿಕ್ – ಚೈತ್ರಾ ಆಚಾರ್ ಪ್ರೇಮಕಥೆ

‘ಕಾಂತಾರ’ ಚಿತ್ರದ ನಂತರ ಕನ್ನಡದಲ್ಲಿ ಕರಾವಳಿ ಸೀಮೆಯ ಆಚಾರ-ವಿಚಾರದ ಕುರಿತಾದ ಸಾಕಷ್ಟು ಚಿತ್ರಗಳು ಸೆಟ್ಟೇರುತ್ತಿವೆ. ಕಳೆದ ವಾರವಷ್ಟೇ ‘ಕಲ್ಜಿಗ’ ಎಂಬ ಚಿತ್ರವೊಂದು ಬಿಡುಗಡೆ ಆಗಿತ್ತು. ಈಗ ‘ಮಾರ್ನಮಿ’ ಎಂಬ ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದೆ.

‘ಪಿಂಗಾರ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್. ಶೆಟ್ಟಿ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ರಿಶಿತ್ ಶೆಟ್ಟಿ ಚೊಚ್ಚಲ ಪ್ರಯತ್ನವೇ ಈ ‘ಮಾರ್ನಮಿ’. ಈ ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ‘ಗಿಣಿರಾಮ’ ಖ್ಯಾತಿಯ ರಿತ್ವಿಕ್ ಮಾತಾಡ್‍ ಮತ್ತು ಚೈತ್ರಾ ಆಚಾರ್‍ ಈ ಚಿತ್ರದಲ್ಲಿ ನಾಯಕ-ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಸುಧಿ ಆರ್ಯನ್‍ ಕಥೆ ರಚಿಸಿದ್ದಾರೆ. ಶಿಲ್ಪಾ ನಿಶಾಂತ್‍ ಚಿತ್ರ ನಿರ್ಮಿಸುತ್ತಿದ್ದಾರೆ.

ನಿರ್ದೇಶಕ ರಿಶಿತ್ ಶೆಟ್ಟಿ ಮಾತನಾಡಿ, ‘ಮಂಗಳೂರಲ್ಲಿ ಸ್ಕ್ರಿಪ್ಟ್ ಕೆಲಸಕ್ಕೆ ಹೋಗಿದ್ದಾಗ ಸುಧಿ ಪರಿಚಯವಾಗಿದ್ದು, ಅವರು ಒಂದು ಕಥೆ ಮಾಡಿಕೊಂಡಿದ್ದರು. ಅವರು ಡೈರೆಕ್ಷನ್ ಮಾಡಲು ಇಷ್ಟ ಇಲ್ಲ ಅಂದಾಗ ನಾನು ಕಥೆ ಕೇಳಿದೆ. ಅವರು ಪ್ರೀತಿಯಿಂದ ಕೊಟ್ಟರು. ರಿತ್ವಿಕ್ ಅವರಿಗೆ ಹೇಳಿದೆ. ಅವರು ಇದಕ್ಕೆ ಇನ್ನೇನೋ ಬೇಕೋ ಅನಿಸುತ್ತಿದೆ ಎಂದರು. ಬಳಿಕ ಆರು ತಿಂಗಳ ಕಾಲ ಒಂದಿಷ್ಟು ಬದಲಾವಣೆ ಮಾಡಿಕೊಂಡು ಅವರ ಬಳಿ ಹೋದೆ. ಅವರು ಕಥೆ ಕೇಳಿ ಖುಷಿಪಟ್ಟರು. ಬಳಿಕ ನಿರ್ಮಾಪಕರ ಹುಡುಕಾಟದಲ್ಲಿ ನಿಶಾಂತ್ ಭೇಟಿಯಾದರು. ಆ ಬಳಿಕ ಟೈಟಲ್ ಟೀಸರ್ ಮಾಡಿಕೊಂಡು ಬಂದೆವು. ಇದೊಂದು ದಸರಾ ಸಂದರ್ಭದಲ್ಲಿ ನಡೆಯುವ ಪ್ರೇಮಕಥೆ. ಅಕ್ಟೋಬರ್ ಒಂದರಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು.

ರಿತ್ವಿಕ್‍ಗೆ ಇದು ಮೊದಲ ಚಿತ್ರ. ‘ಕಥೆ ಚೆನ್ನಾಗಿದೆ. ಕರಾವಳಿ ಭಾಗದಲ್ಲಿ ನಡೆಯುವ ಅದ್ಭುತ ಲವ್ ಸ್ಟೋರಿ. ದಸರಾ ದಿನವನ್ನು ಮಾರ್ನಮಿ ಎಂದು ಕರೆಯುತ್ತಾರೆ. ಚಿತ್ರದಲ್ಲಿ ಒಳ್ಳೆಯ ತಾರಾಗಣ ಮತ್ತು ತಾಂತ್ರಿಕ ವರ್ಗವಿದೆ’ ಎಂದರು. ಅದ್ಭುತ ತಾಂತ್ರಿಕ ವರ್ಗ ಇದೆ’ ಎಂದು ಮಾಹಿತಿ ಹಂಚಿಕೊಂಡರು.

ನಾಯಕಿ ಚೈತ್ರಾ ಆಚಾರ್ ಮಾತನಾಡಿ, ‘ಕಥೆ ಬಹಳ ಇಷ್ಟವಾಯ್ತು. ಆದರೆ, ಆ ಸಂದರ್ಭದಲ್ಲಿ ಸ್ವಲ್ಪ ಬ್ಯುಸಿ ಇದ್ದ ಕಾರಣ, ಒಪ್ಪಿರಲಿಲ್ಲ. ಮತ್ತೆ ಕಥೆ ನನ್ನ ಬಳಿಯೇ ಬಂತು. ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳೋಣಾ ಎಂದರು. ಅದ್ಭುತ ಕಥೆ. ರಿಷಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ರಿತ್ವಿಕ್ ಅವರ ಜೊತೆ ಕೆಲಸ ಮಾಡಲು ಖುಷಿ ಇದೆ. ಕಥೆ ನಂಬಿದ್ದೇವೆ, ಚರಣ್ ರಾಜ್ ಅವರ ಸಂಗೀತ ಇದೆ. ನಾನು ಚಿತ್ರೀಕರಣಕ್ಕೆ ಹೊರಡಲು ತುದಿಗಾಲಲ್ಲಿ ಕಾಯುತ್ತಿದ್ದೇನೆ’ ಎಂದರು.

‘ಮಾರ್ನಮಿ’ ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಪ್ರಕಾಶ್ ತುಮ್ಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಹಾಗೂ ಶಿವಸೇನ ಛಾಯಾಗ್ರಹಣವಿದೆ.

Tags:
error: Content is protected !!