Mysore
21
mist

Social Media

ಗುರುವಾರ, 29 ಜನವರಿ 2026
Light
Dark

‘ಹನುಮ್ಯಾನ್‍ 2’ನಲ್ಲಿ ರಿಷಭ್‍ ಶೆಟ್ಟಿ? ತೆಲುಗು ಚಿತ್ರದಲ್ಲಿ ನಟಿಸುವ ಸಾಧ್ಯತೆ

‘ಹನುಮ್ಯಾನ್‍’ ಚಿತ್ರದ ನಂತರ ನಿರ್ದೇಶಕ ಪ್ರಶಾಂತ್‍ ವರ್ಮಾ, ಮುಂದುವರೆದ ಭಾಗ ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಈ ವರ್ಷದ ಆರಂಭದಲ್ಲಿ, ಅಂದರೆ ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ‘ಹನುಮ್ಯಾನ್‍’ ಚಿತ್ರವನ್ನು ಮಾಡುವುದಾಗಿ ಪ್ರಶಾಂತ್‍ ವರ್ಮ ಘೋಷಿಸಿದ್ದರು.

ಆ ನಂತರ ಆ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಏಕೆಂದರೆ, ನಂದಮೂರಿ ಬಾಲಕೃಷ್ಣ ಅವರ ಮಗ ಮೋಕ್ಷಜ್ಞ ಅವರನ್ನು ತೆರೆಗೆ ಪರಿಚಯಿಸುವುದಕ್ಕೆ ಪ್ರಶಾಂತ್‍ ವರ್ಮಾ ಮುಂದಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಮೋಕ್ಷಜ್ಞ ಅಭಿನಯದ ಮೊದಲ ಚಿತ್ರದ ಘೋಷಣೆ ಆಗುವುದರ ಜೊತೆಗೆ, ಚಿತ್ರದ ಮೊದಲ ಪೋಸ್ಟರ್‍ ಸಹ ಬಿಡುಗಡೆಯಾಗಿತ್ತು.

ಇದೀಗ ‘ಹನುಮ್ಯಾನ್‍ 2’ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಈ ಬಾರಿ ಕನ್ನಡದ ನಟ ಮತ್ತು ‘ಕಾಂತಾರ’ ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ರಿಷಭ್‍ ಶೆಟ್ಟಿ, ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತದೆ.

‘ಕಾಂತಾರ’ ಚಿತ್ರದ ಯಶಸ್ಸಿನ ನಂತರ, ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀರಾ? ಎಂಬ ಪ್ರಶ್ನೆಯೊಂದು ಸಂದರ್ಶನದಲ್ಲಿ ಎದುರಾದಾಗ, ತಮಗೆ ಕನ್ನಡದಲ್ಲೇ ಮುಂದುವರೆಯುವುದಕ್ಕೆ ಹೆಚ್ಚು ಇಷ್ಟ ಎಂದು ರಿಷಭ್ ಹೇಳಿಕೊಂಡಿದ್ದರು. ಆ ನಂತರವೂ ಆಗಾಗ ಬೇರೆ ಭಾಷೆಯ ಚಿತ್ರಗಳಲ್ಲಿ ರಿಷಭ್‍ ಶೆಟ್ಟಿ ಹೆಸರು ಕೆಲವೊಮ್ಮೆ ಕೇಳಿಬರುತ್ತಿರುತ್ತದೆ.

ಇದೀಗ ‘ಹನುಮ್ಯಾನ್‍ 2’ ಚಿತ್ರದಲ್ಲೂ ರಿಷಭ್‍ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ರಿಷಭ್ ಆಗಲೀ, ಪ್ರಶಾಂತ್‍ ವರ್ಮಾ ಆಗಲೀ ಇದನ್ನು ಸ್ಪಷ್ಟಪಡಿಸಿಲ್ಲ. ಸದ್ಯ ಇದೊಂದು ಗಾಳಿಸುದ್ದಿ ಎಂದು ಹೇಳಲಾಗಿದ್ದು, ರಿಷಭ್‍ ಶೆಟ್ಟಿ ಅಥವಾ ಪ್ರಶಾಂತ್‍ ವರ್ಮಾ ಈ ಕುರಿತು ಸ್ಪಷ್ಟನೆ ನೀಡಬೇಕಿದೆ.

ಸದ್ಯ, ‘ಕಾಂತಾರ – ಅಧ್ಯಾಯ 1’ ಚಿತ್ರದಲ್ಲಿ ರಿಷಭ್‍ ನಾಯಕನಾಗಿ ನಟಿಸುವುದರ ಜೊತೆಗೆ, ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಅರವಿಂದ್‍ ಕಶ್ಯಪ್‍ ಛಾಯಾಗ್ರಹಣ ಮತ್ತು ಅಜನೀಶ್ ‍ಲೋಕನಾಥ್‍ ಸಂಗೀತವಿದೆ. ಈ ಚಿತ್ರದ ಚಿತ್ರೀಕರಣ ಸದ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಆಗಸ್ಟ್ನಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.

Tags:
error: Content is protected !!