ತೆಲುಗಿನ ಜನಪ್ರಿಯ ಹಾಗೂ ಯಶಸ್ವಿ ಚಿತ್ರ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್, ಇದೀಗ ಮತ್ತೊಂದು ದೊಡ್ಡ ಚಿತ್ರಕ್ಕೆ ಕೈಹಾಕಿದೆ. ‘ಪ್ರೊಡಕ್ಷನ್ ನಂಬರ್ 36’ ಹೆಸರಿನ ಬಿಗ್ ಬಜೆಟ್ ಸಿನಿಮಾ ಘೋಷಣೆ ಮಾಡಿದ್ದು, ಈ ಮೂಲಕ ಕನ್ನಡ ಸಿನಿಮಾ ನಿರ್ಮಾಣಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಐತಿಹಾಸಿಕ ಆಕ್ಷನ್ ಡ್ರಾಮಾ ಹಿನ್ನೆಲೆಯ ಈ ಸಿನಿಮಾದಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ. ಚಿತ್ರದ ಘೋಷಣಾ ಪೋಸ್ಟರ್ ಸಹ ಇತ್ತೀಚೆಗೆ ಬಿಡುಗಡೆಯಾಗಿದೆ. ಸಿತಾರ ಎಂಟರ್‌ಟೈನ್‌ಮೆಂಟ್ ಹಾಗೂ ಫಾರ್ಚೂನ್ ಫೋರ್ ಸಿನಿಮಾಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದೆ. 18ನೇ ಶತಮಾನದ ಕಥೆ ಈ ಚಿತ್ರದಲ್ಲಿದ್ದು, ಈ ಐತಿಹಾಸಿಕ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿರುವವರು ನಿರ್ದೇಶಕ ಅಶ್ವಿನ್ ಗಂಗರಾಜು.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಒಂದೇ ಸಮಯದಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ. ಇನ್ನುಳಿದಂತೆ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಇನ್ನುಳಿದಂತೆ ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿ ಬಹುತೇಕ ಕನ್ನಡಿಗರು ಕೆಲಸ ಮಾಡುವುದರ ಜೊತೆಗೆ, ಬುಹುಭಾಗ ಚಿತ್ರೀಕರಣ ಕರ್ನಾಟಕದಲ್ಲೇ ಮಾಡಲಾಗುವುದು.
ಇದು ರಿಷಭ್ ಶೆಟ್ಟಿ ಇತ್ತೀಚಿನ ವರ್ಷಗಳಲ್ಲಿ ಒಪ್ಪಿಕೊಂಡಿರುವ ಮೂರನೇ ಪ್ಯಾನ್ ಇಂಡಿಯಾ ಚಿತ್ರ. ಇದಕ್ಕೂ ಮೊದಲು ಅವರು ‘ಜೈ ಹನುಮಾನ್’ ಮತ್ತು ‘ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಾಯಕನಾಗಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಆ ಚಿತ್ರಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಈ ಪೈಕಿ ಒಂದು ಪೌರಾಣಿಕ ಕಂ ಸಾಮಾಜಿಕ ಚಿತ್ರವಾದರೆ, ಇನ್ನೊಂದು ಐತಿಹಾಸಿಕ ಚಿತ್ರ. ಈ ಚಿತ್ರ ಐತಿಹಾಸಿಕ ಚಿತ್ರ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಅವರು ‘ಕಾಂತಾರ – ಚಾಪ್ಟರ್ 1’ ಚಿತ್ರದಲ್ಲಿ ನಟಿಸಿ ನಿರ್ದೇಶಿಸಿದ್ದು, ಆ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರವು ಅಕ್ಟೋಬರ್.02ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.





