ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಜೈಲು ಪಾಲಾಗಿರುವ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆಗಸ್ಟ್.27ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಮೊನ್ನೆಯಷ್ಟೇ ಪವಿತ್ರಾ ಗೌಡ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೈಶಂಕರ್ ಅವರು ಜಾಮೀನು ಅರ್ಜಿಯನ್ನು ಆಗಸ್ಟ್.27ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಸಲು ಇನ್ನು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಪವಿತ್ರಾ ಗೌಡ ಅವರು ಜಾಮೀನು ಅರ್ಜಿ ಕೋರಿ ಅರ್ಜಿ ಸಲ್ಲಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ದರ್ಶನ್ ದೂರವಾದ ಬೆನ್ನಲ್ಲೇ ಏಕಾಂಗಿಯಾಗಿ ಹೋರಾಟ ಮಾಡುತ್ತಿರುವ ಪವಿತ್ರಾ ಗೌಡಗೆ ಆದಷ್ಟು ಬೇಗ ಜಾಮೀನು ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ನನಗೆ ಮೆಸೇಜ್ ಬಂದಿದ್ದನ್ನು ದರ್ಶನ್‌ಗೆ ತಿಳಿಸಿದ್ದೆ. ಆನಂತರ ಏನಾಯ್ತು ಅನ್ನೋದು ನನ್ನ ಗಮನಕ್ಕೆ ಬಂದಿಲ್ಲ ಅಂತಾ ಪವಿತ್ರಾ ಗೌಡ ಹೇಳುತ್ತಿದ್ದು, ಈ ಬಗ್ಗೆ ಪವಿತ್ರಾ ಗೌಡ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದೆಲ್ಲದರ ಜೊತೆಗೆ ಪವಿತ್ರಾಗೌಡ ಮಹಿಳೆ ಎಂಬ ಕಾರಣಕ್ಕೆ ನಟ ದರ್ಶನ್‌ಗಿಂತ ಮೊದಲೇ ಜಾಮೀನು ಸಿಗಲಿದೆ ಎನ್ನಲಾಗುತ್ತಿದ್ದು, ಆಗಸ್ಟ್.27ಕ್ಕೆ ಏನಾಗುತ್ತದೆ ಎಂಬುದನ್ನು ಎಲ್ಲರೂ ಕಾದು ನೋಡಬೇಕಿದೆ.