ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶವನ್ನು ನಾಳೆಗೆ ಕಾಯ್ದಿರಿಸಿದೆ.
ಇಂದು ಹೈಕೋರ್ಟ್‌ನಲ್ಲಿ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ತಮ್ಮ ವಾದ ಮಂಡಿಸಿದರು. ನಟ ದರ್ಶನ್‌ಗೆ ತೀವ್ರ ಬೆನ್ನು ನೋವಿನ ಸಮಸ್ಯೆಯಿದ್ದು, ಅದರ ಜೊತೆಗೆ ಪದೇ ಪದೇ ಕಾಲು ಮರುಗಟ್ಟುವಿಕೆ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅವರಿಗೆ ತುರ್ತುಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕಾಗಿ ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಎಸ್‌ಪಿಪಿ ಕೂಡ ದರ್ಶನ್ ಜಾಮೀನು ಅರ್ಜಿಗೆ ಕೆಲ ತಕರಾರು ಎತ್ತಿದರು.
ಬಳಿಕ ವಾದ ಮುಂದುವರಿಸಿದ ನಾಗೇಶ್ ಅವರು, ಆರೋಗ್ಯ ಪ್ರತಿಯೊಬ್ಬರ ಹಕ್ಕು, ಅವರ ಕಷ್ಟದ ಸಮಯದಲ್ಲಿ ಯಾವುದೇ ಮೆರಿಟ್‌ಗಳನ್ನು ನೋಡದೆ ಜಾಮೀನು ನೀಡಬೇಕಾಗುತ್ತದೆ ಎಂದರು. ಆದರೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಈಗ ವೈದ್ಯರು ನೀಡಿರುವ ವರದಿಯಲ್ಲಿ ಅಷ್ಟೇನೂ ಸಮಸ್ಯೆಯಿಲ್ಲ ಎಂದರು.
ಹಾಗೇಯೆ ʼವೈದ್ಯರ ವರದಿಯಲ್ಲಿ ಯಾವ ರೀತಿಯ ಶಸ್ತ್ರಚಿಕಿತ್ಸೆ ಮಾಡಬೇಕಿದೆ? ಎಷ್ಟು ದಿನದ ಅವಶ್ಯಕತೆ ಇದೆ? ಎಲ್ಲಿ ಆಪರೇಷನ್ ಮಾಡಬೇಕು ಎಂಬ ವಿಷಯ ಪ್ರಸ್ತಾಪವಿಲ್ಲʼ ಎಂದರು.
ಇದಕ್ಕೆ ಉತ್ತರಿಸಿದ ಸಿ.ವಿ ನಾಗೇಶ್, ಈ ಹಿಂದೆ ದರ್ಶನ್ ಮೈಸೂರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈಗಲೂ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ ಎಂದು ವಾದಿಸಿದರು. ಇಬ್ಬರೂ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ಆದೇಶವನ್ನು ನಾಳೆಗೆ ಮುಂದೂಡಿದ್ದಾರೆ.





