Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

‘ಧ್ರುವತಾರೆ’ಯಲ್ಲಿ ನಿಜಜೀವನದ ಗಂಡ-ಹೆಂಡತಿ …

ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿ, ಆ ನಂತರ ನಿಜಜೀವನದಲ್ಲಿ ಪ್ರೀತಿಸಿ, ಮದುವೆಯಾದ ಅದೆಷ್ಟೋ ಜೋಡಿಗಳು ಇದ್ದಾರೆ. ಆದರೆ, ನಿಜಜೀವನದಲ್ಲಿ ಮದುವೆಯಾಗಿ, ಆ ನಂತರ ಚಿತ್ರಗಳಲ್ಲೂ ದಂಪತಿಯಾಗಿ ಕಾಣಿಸಿಕೊಂಡವರ ಸಂಖ್ಯೆ ಕಡಿಮೆಯೇ. ಈಗ ಆ ಸಾಲಿಗೆ ಪ್ರತೀಕ್‍ ಮತ್ತು ಮೌಲ್ಯ ಸಹ ಸೇರಿದ್ದಾರೆ.

ಪ್ರತೀಕ್‍ ಮತ್ತು ಮೌಲ್ಯ ಇದೀಗ ‘ಧ್ರುವತಾರೆ’ ಎಂಬ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಧ್ರುವತಾರೆ’ ಎಂದರೆ ಡಾ. ರಾಜಕುಮಾರ್‍ ಅಭಿನಯದ ಚಿತ್ರ ನೆನಪಾಗಬಹುದು. ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಹೆಸರು ಅದೇ ಎನ್ನುವುದು ಬಿಟ್ಟರೆ, ಮಿಕ್ಕಂತೆ ಎಲ್ಲವೂ ಬೇರೆಯದೇ. ಈ ಹೊಸ ‘ಧ್ರುವತಾರೆ’ ತಯಾರಾಗಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇತ್ತೀಚೆಗೆ ಸೂರಜ್‍ ಜೋಯಿಸ್‍ ಸಂಗೀತ ಸಂಯೋಜಿಸಿರುವ ಹಾಡುಗಳ ಬಿಡುಗಡೆಯಾಗಿದೆ.

ಬ್ರೇಕಪ್‍ ಆದ ಯುವಕ-ಯುವತಿಯರ ಸುತ್ತ ‘ಧ್ರುವತಾರೆ’ ಸುತ್ತುತ್ತದಂತೆ. ಈ ಕುರಿತು ಮಾತನಾಡುವ ನಟ-ನಿರ್ದೇಶಕ ಪ್ರತೀಕ್‍, ‘ಬ್ರೇಕಪ್‍ ಆದ ಹುಡುಗನೊಬ್ಬ ಚಟದಲ್ಲಿ ಬಿದ್ದು ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುತ್ತಾನೆ. ಈ ಸಂದರ್ಭದಲ್ಲಿ ಯುವತಿಯೊಬ್ಬಳ ಪರಿಚಯವಾಗುತ್ತದೆ. ಅವಳಿಗೂ ಇನ್ನೊಬ್ಬ ಹುಡುಗನ ಜೊತೆಗೆ ಬ್ರೇಕಪ್‍ ಆಗಿರುತ್ತದೆ. ಇಬ್ಬರೂ ಪ್ರೀತಿಸಿ ಮದುವೆಯಾಗುತ್ತದೆ. ಆ ನಂತರ ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಈಗಿನ ಟ್ರೆಂಡ್‍ಗೆ ಚಿತ್ರ ಮಾಡಿದ್ದೇವೆ. ಈ ಚಿತ್ರದಲ್ಲಿ ಪೋಲಿ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪರಿವರ್ತನ್‍ ಎನ್ನುವ ಪಾತ್ರ ನನ್ನದು. ನನ್ನ ಹೆಂಡತಿ ಮೌಲ್ಯ ಇದರಲ್ಲಿ ಅಪೂರ್ವ ಎಂಬ ಪಾತ್ರ ಮಾಡಿದ್ದಾರೆ. ಕಾರ್ತಿಕ್‍ ಮಹೇಶ್ ‍ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದರು.

‘ಧ್ರುವತಾರೆ’ ಚಿತ್ರವು ತಮ್ಮ ಜೀವನದ ಒಂದು ಭಾಗವಾಗಿದೆ ಎನ್ನುವ ಮೌಲ್ಯ, ‘ನಾನು ಚಿತ್ರರಂಗಕ್ಕೆ ಬರುತ್ತೀನಿ, ನಟರೊಬ್ಬನ್ನು ಮದುವೆಯಾಗುತ್ತೀನಿ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ. ಈ ಚಿತ್ರದಲ್ಲಿ ಅಪೂರ್ವ ಎಂಬ ಪಾತ್ರ ನನ್ನದು. ಅವಳೊಬ್ಬ ಮುಗ್ಧೆ. ಅವಳಿಗೆ ಕುತೂಹಲ ಜಾಸ್ತಿ. ಬಾಡಿ ಶೇಮಿಂಗ್ ಎಷ್ಟು ಪರಿಣಾಮ ಬೀರುತ್ತದೆ ಎಂಬ ಪಾತ್ರದ ಮೂಲಕ ತೋರಿಸಿಕೊಡಲಾಗಿದೆ’ ಎಂದರು.

ಜಿ.ಪಿ. ಫಿಲಂಸ್ ಸ್ಟುಡಿಯೋಸ್ ಬ್ಯಾನರ್ ನಡಿ, ಗಣೇಶ್ ಕುಮಾರ್ ನಿರ್ಮಿಸಿರುವ ‘ಧ್ರುವತಾರೆ’ ಚಿತ್ರಕ್ಕೆ ಪ್ರತೀಕ್‍ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿ, ಸಂಕಲನ, ವಿಎಫ್‍ಎಕ್ಸ್ ಮತ್ತು ಡಿಐ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಭಟ್, ಮೂಗು ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ.ಡಿ ಸತೀಶ್ ಸೇರಿದಂತೆ ಹಲವರು ಇದ್ದಾರೆ.

‘ಧ್ರುವತಾರೆ’ ಚಿತ್ರವು ಸೆಪ್ಟೆಂಬರ್‍ 20ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

Tags: