ಮೈಸೂರು: ತೆಲುಗು ನಿರ್ದೇಶಕ ಬುಚ್ಚಿಬಾಬು ಸನಾ ಅವರು ತಮ್ಮ ಹೊಸ ಸಿನಿಮಾದ ಚಿತ್ರಕತೆಯನ್ನು ಮೈಸೂರಿನ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದು, ದೇವಸ್ಥಾನದ ಆವರಣದಲ್ಲಿ ಚಿತ್ರಕಥೆ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಕುರಿತು ಇಂದು (ನ.23) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಂದು ನನ್ನ ಬದುಕಿನಲ್ಲಿಯೇ ತುಂಬಾ ಮಹತ್ವದ ದಿನವಾಗಿದ್ದು, ಹಲವು ನಿರೀಕ್ಷೆಯಿಂದ ಕಾಯುತ್ತಿರುವ ದಿನವಾಗಿದೆ. ಮೈಸೂರಿನ ತಾಯಿ ಚಾಮುಂಡೇಶ್ವರಿಯ ಆರ್ಶೀವಾದದೊಂದಿಗೆ ಈ ದಿನವನ್ನು ಆರಂಭಿಸುತ್ತಿದ್ದೇನೆ. ಜೊತೆಗೆ ನಿಮ್ಮೆಲ್ಲರ ಆರ್ಶೀವಾದದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಇನ್ನೂ ಬುಚ್ಚಿಬಾಬು ಸನಾ ಅವರ, ಈ ಪೋಸ್ಟ್‌ಗೆ ಮೆಗಾ ಕುಟುಂಬದ ನಟ ಪವನ್ ತೇಜ್ ಪ್ರತಿಕ್ರಿಯೆ ನೀಡಿದ್ದು, ಈ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದೇವೆ. ಬೊಂಬಾಟ್ ಆಗಿ ಮಾಡು ಬುಚ್ಚಿಮಾಮ ಎಂದು ಹೇಳಿದ್ದಾರೆ.
ಸಿನಿಮಾದ ವಿಶೇಷತೆ ಏನು?
ತೆಲುಗು ನಟ ರಾಮ್ ಚರಣ್ ತೇಜ ಹಾಗೂ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಟಿಸಲಿರುವ ಹೊಸ ಸಿನಿಮಾವನ್ನು ಬುಚ್ಚಿಬಾಬು ಸನಾ ಅವರು ನಿರ್ದೇಶಿಸಲಿದ್ದು, ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿಯೇ ಪ್ರಾರಂಭಗೊಂಡಿದ್ದು, ಸುಮಾರು ಎರಡು ವಾರಗಳ ಕಾಲ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಸಿನಿಮಾವನ್ನು ವೃದ್ಧಿ ಸಿನಿಮಾ ಪ್ರೊಡಕ್ಷನ್ ಹೌಸ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದ್ದು, ರಾಮ್ ಚರಣ್ ತೇಜ ಅವರ 16ನೇ ಸಿನಿಮಾವಾಗಿದೆ. ಅಲ್ಲದೇ ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಲಿದ್ದು, ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.





