Mysore
16
clear sky

Social Media

ಗುರುವಾರ, 29 ಜನವರಿ 2026
Light
Dark

ರಜನಿಕಾಂತ್‍, ‘ಶೋಲೆ’ಗೆ 50 ವರ್ಷಗಳ ಸಂಭ್ರಮ …

rajanikhanth

2025, ಕನ್ನಡ ಚಿತ್ರರಂಗಕ್ಕೆ ಬಹಳ ಮಹತ್ವದ ವರ್ಷ. ಪಾರ್ವತಮ್ಮ ರಾಜಕುಮಾರ್ ನಿರ್ಮಾಪಕಿಯಾಗಿ 50 ವರ್ಷಗಳಾಗಿವೆ. ರಾಜೇಂದ್ರ ಸಿಂಗ್‍ ಬಾಬು ನಿರ್ದೇಶಕರಾಗಿ 50 ವರ್ಷಗಳಾಗಿವೆ. ಅದೇ ರೀತಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್‍ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಾಗೂ ಭಾರತದ ಅತ್ಯಂತ ಜನಪ್ರಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಶೋಲೆ’ ಚಿತ್ರಕ್ಕೂ ಇದೀಗ 50 ವರ್ಷಗಳ ಸಂಭ್ರಮ.

ರಜನಿಕಾಂತ್‍ ಅಭಿನಯದ ಮೊದಲ ಚಿತ್ರ ‘ಅಪೂರ್ವ ರಾಗಂಗಳ್‍’ ಚಿತ್ರಕ್ಕೆ ಇದೀಗ 50 ವರ್ಷಗಳು. ಕೆ. ಬಾಲಚಂದರ್ ನಿರ್ದೇಶನ ‘ಅಪೂರ್ವ ರಾಗಂಗಳ್’ ಬಿಡುಗಡೆಯಾಗಿದ್ದು 1975ರ ಆಗಸ್ಟ್ 15ರಂದು. ಹಾಗಾಗಿ, ಶುಕ್ರವಾರ ಈ ಚಿತ್ರಕ್ಕೆ ಮತ್ತು ರಜನಿಕಾಂತ್‍ ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳಾಗಿವೆ. ಇದೇ ಸಂದರ್ಭದಲ್ಲಿ ರಜನಿಕಾಂತ್‍ ಅಭಿನಯದ 171ನೇ ಚಿತ್ರ ‘ಕೂಲಿ’ ಬಿಡುಗಡೆಯಾಗಿರುವುದು ವಿಶೇಷ.

‘ಅಪೂರ್ವ ರಾಗಂಗಳ್‍’ಗೂ ಮೊದಲೇ ರಜನಿಕಾಂತ್‍, ಪುಟ್ಟಣ್ಣ ಕಣಗಾಲ್‍ ನಿರ್ದೇಶನದ ‘ಕಥಾ ಸಂಗಮ’ ಚಿತ್ರದಲ್ಲಿ ನಟಿಸಿದ್ದರು. ಆದರೆ, ಚಿತ್ರ ಕಾರಣಾಂತರಗಳಿಂದ ತಡವಾಯಿತು. ಈ ಮಧ್ಯೆ ಬಾಲಚಂದರ್ ತಮ್ಮ ಹೊಸ ಚಿತ್ರ ‘ಅಪೂರ್ವ ರಾಗಂಗಳ್‍’ಗೆ ಹೊಸ ಚಿತ್ರಕ್ಕೆ ಹೊಸ ನಟನನ್ನು ಹುಡುಕುತ್ತಿದ್ದರಂತೆ. ಅಷ್ಟರಲ್ಲಿ ಅವರ ಕಣ್ಣಿಗೆ ರಜನಿಕಾಂತ್‍ ಬಿದ್ದಿದ್ದಾರೆ. ಪುಟ್ಟಣ್ಣ ಪರಿಚಯಿಸಿದ ಹುಡುಗ ಎಂಬ ಕಾರಣಕ್ಕೆ ರಜನಿಕಾಂತ್‍ ಅವರಿಗೆ ಬಾಲಚಂದರ್ ಅವಕಾಶ ಕೊಟ್ಟದ್ದಾರೆ. ಈ ಚಿತ್ರ ಮೊದಲು ಬಿಡುಗಡೆಯಾಗಿದ್ದರಿಂದ, ಇದು ರಜನಿಕಾಂತ್‍ ಅವರ ಮೊದಲ ಚಿತ್ರವಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್‍ ಜೊತೆಗೆ ಕಮಲ್ ಹಾಸನ್‍, ಸುಂದರರಾಜನ್‍, ಶ್ರೀವಿದ್ಯಾ, ಜಯಸುಧಾ, ತಾಯ್‍ ನಾಗೇಶ್‍ ಮುಂತಾದವರು ನಟಿಸಿದ್ದರು.

ಇನ್ನು, ಭಾರತದ ಅತ್ಯಂತ ಜನಪ್ರಿಯ ಮತ್ತು ಅತೀ ಹೆಚ್ಚು ವೀಕ್ಷಣೆಗೊಳಗಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಶೋಲೆ’ ಚಿತ್ರ ಸಹ 1975ರ ಆಗಸ್ಟ್ 15ರಂದು ಬಿಡುಗಡೆಯಾಗಿ, ಈ ಸ್ವಾತಂತ್ರ್ಯ ದಿನಕ್ಕೆ 50 ವರ್ಷಗಳನ್ನು ಪೂರೈಸಿದೆ. ಅಮಿತಾಭ್‍ ಬಚ್ಚನ್‍, ಧರ್ಮೇಂದ್ರ, ಸಂಜೀವ್‍ ಕುಮಾರ್, ಅಮ್ಜದ್‍ ಖಾನ್, ಹೇಮಾ ಮಾಲಿನಿ, ಜಯಾ ಬಾಧುರಿ ಮುಂತಾದವರು ನಟಿಸಿದ್ದ ಈ ಚಿತ್ರವನ್ನು ರಮೇಶ್‍ ಸಿಪ್ಪಿ ನಿರ್ದೇಶನ ಮಾಡಿದ್ದರು. ಅವರ ತಂದೆ ಜಿ.ಪಿ. ಸಿಪ್ಪಿ ಚಿತ್ರವನ್ನು ನಿರ್ಮಿಸಿದ್ದರು. ಆ ಕಾಲದ ಅತ್ಯಂತ ಯಶಸ್ವಿ ಬರಹಗಾರ ಜೋಡಿಯಾದ ಸಲೀಂ-ಜಾವೇದ್‍, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದರು.

Tags:
error: Content is protected !!