‘ಮಹಾಭಾರತ’ ಚಿತ್ರ ಮಾಡಬೇಕು ಎನ್ನುವುದು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕನಸು. ‘ಮಹಾಭಾರತ’ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಎಂದು ಕೆಲವು ವರ್ಷಗಳ ಹಿಂದೆಯೇ ಅವರು ಹೇಳಿಕೊಂಡಿದ್ದರು. ‘ಮಹಾಭಾರತ’ ಸರಣಿಯ ಕನಿಷ್ಠ 10 ಚಿತ್ರಗಳನ್ನು ನಿರ್ದೇಶಿಸುವುದಾಗಿ ಹೇಳಿದ್ದರು.
ಆದರೆ, ಅದು ಅಷ್ಟು ಸುಲಭವಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂಬುದರ ಅರಿವಿದೆ. ‘’ಮಹಾಭಾರತ’ ಚಿತ್ರ ಮಾಡಬೇಕೆಂದರೆ, ದೇಶದಲ್ಲಿರುವ ಹಲವು ‘ಮಹಾಭಾರತ’ಗಳ ಕುರಿತು ಓದುವುದಕ್ಕೆ ಒಂದು ವರ್ಷ ಬೇಕಾಗುತ್ತದೆ. ‘ಮಹಾಭಾರತ’ವನ್ನು ತೆರೆಗೆ ತರಬೇಕೆಂದರೆ, 10 ಚಿತ್ರಗಳಲ್ಲಿ ಬೇಕಾಗುತ್ತದೆ. ಯಾವಾಗ ಆಗುತ್ತದೋ ಗೊತ್ತಿಲ್ಲ’ ಎಂದು ಹೇಳಿದ್ದರು.
ಈಗ್ಯಾಕೆ ಈ ವಿಷಯ ಎಂದರೆ, ‘ಮಹಾಭಾರತ’ ಚಿತ್ರದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ‘ಹಿಟ್ 3’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಮಹಾಭಾರತ’ ಚಿತ್ರವನ್ನು ಮಾಡುತ್ತಿರುವುದು ನಿಜ ಮತ್ತು ಅದರಲ್ಲಿ ನಾನಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸೂಚನೆ ಕೊಟ್ಟಿದ್ದಾರೆ.
ಹೈದರಾಬಾದ್‍ನಲ್ಲಿ ನಡೆದ ‘ಹಿಟ್ 3’ ಚಿತ್ರದ ಪ್ರೀ-ರಿಲೀಸ್ ಇವೆಂಟ್‍ನಲ್ಲಿ ರಾಜಮೌಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ‘ಈಗ’ ಚಿತ್ರದಲ್ಲಿ ನಾನಿ ಅವರನ್ನು ನಿರ್ದೇಶಿಸಿದ್ದರು ರಾಜಮೌಳಿ. ಆ ನಂತರ ಇಬ್ಬರು ಒಟ್ಟಿಗೆ ಕೆಲಸ ಮಾಡಲಿಲ್ಲ. ‘ಮಹಾಭಾರತ’ ಚಿತ್ರದಲ್ಲೇನಾದರೂ ನಾನಿ ಇರುವ ಸಾಧ್ಯತೆ ಇದೆಯಾ? ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದಾರೆ.
ಸದ್ಯ ರಾಜಮೌಳಿ, ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಹೆಸರೇನು? ಯಾವಾಗ ಬಿಡುಗಡೆ? ಯಾರೆಲ್ಲಾ ಇರುತ್ತಾರೆ? ಈ ಬಾರಿ ರಾಜಮೌಳಿ ಏನು ಹೇಳುವುದಕ್ಕೆ ಹೊರಟಿದ್ದಾರೆ? ಮುಂತಾದ ವಿಷಯಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.
ವಿಶೇಷವೆಂದರೆ, ಇತ್ತೀಚೆಗಷ್ಟೇ ‘ಮಹಾಭಾರತ’ ಚಿತ್ರವನ್ನು ಮಾಡುವುದಾಗಿ ಆಮೀರ್ ಖಾನ್ ಸಹ ಘೋಷಿಸಿದ್ದರು. ಆದರೆ, ಆ ಚಿತ್ರ ಯಾವಾಗ ಶುರುವಾಗುತ್ತದೆ ಎಂದು ಅವರಿಗೂ ಸ್ಪಷ್ಟತೆ ಇಲ್ಲ. ರಾಜಮೌಳಿ ಮತ್ತು ಆಮೀರ್ ಖಾನ್ ಅವರ ‘ಮಹಭಾರತ’ಗಳ ಕ್ಲಾಶ್ ಆಗದಿದ್ದರೆ ಸಾಕು.





