Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಪಡಿತರ ವ್ಯವಸ್ಥೆಯ ಮೇಲೊಂದು ಚಿತ್ರ; ಹಳ್ಳಿ ಹುಡುಗಿಯಾದ ರಾಗಿಣಿ

ragini kannada movie

ಎರಡು ತಿಂಗಳ ಹಿಂದಷ್ಟೇ ರಾಗಿಣಿ ದ್ವಿವೇದಿ ಅಭಿನಯದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರವು ಸೆಟ್ಟೇರಿತ್ತು. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ವರ್ಷದ ಕೊನೆಗೆ ಚಿತ್ರ ಬಿಡುಗಡೆ ಆಗಲಿದೆ.

ಸದ್ಯದಲ್ಲೇ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಪ್ರಾರಂಭವಾಗುತ್ತಿರುವ ವಿಷಯವನ್ನು ತಿಳಿಸುವುದಕ್ಕೆ ಚಿತ್ರತಂಡದವರು ಮಾಧ್ಯಮದವರೆದುರು ಬಂದಿದ್ದರು. ಇದೇ ವೇಳೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಹೆಸರೇ ಹೇಳುವಂತೆ, ಇದು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆಯ ಸುತ್ತ ನಡೆಯುವ ಕಥಾಹಂದರವನ್ನು ಹೊಂದಿರುವ ಚಿತ್ರ. ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಯಲ್ಲಿ ನಡೆಯುವ ಆಗು-ಹೋಗುಗಳ ಸುತ್ತ ಇಡೀ ಚಿತ್ರದ ಕಥೆ ಸಾಗುತ್ತದೆ. ರಾಗಿಣಿ, ಕುಮಾರ್‍ ಬಂಗಾರಪ್ಪ, ದೊಡ್ಡಣ್ಣ ಮೊದಲಾದವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡುವ ರಾಗಿಣಿ, ‘ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಮೊದಲ ಬಾರಿಗೆ ಈ ಸಿನಿಮಾದಲ್ಲಿ ಗ್ರಾಮೀಣ ಭಾಗದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಳ್ಳಿ ಹುಡುಗಿಯೊಬ್ಬಳು ತನ್ನ ಊರಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಭ್ರಷ್ಟ ವ್ಯವಸ್ಥೆಯ ವಿರುದ್ದ ಹೇಗೆ ಹೋರಾಡುತ್ತಾಳೆ ಎಂಬುದೇ ನನ್ನ ಪಾತ್ರ. ಸಿನಿಮಾ ತುಂಬ ಚೆನ್ನಾಗಿ ಬರುತ್ತಿದೆ, ಗ್ರಾಮೀಣ ಜನರಿಗೆ ಖಂಡಿತವಾಗಿಯೂ ಈ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಳ್ಳಿಯ ಜನರಿಗೆ ಹತ್ತಿರವಾಗುವಂಥ ಕಥೆ ಈ ಚಿತ್ರದಲ್ಲಿದೆ ಎನ್ನುವ ಕುಮಾರ್ ಬಂಗಾರಪ್ಪ, ಪಡಿತರ ವ್ಯವಸ್ಥೆಯ ಲೋಪಗಳನ್ನು ಬಹುತೇಕ ಜನಸಾಮಾನ್ಯರು ಅನುಭವಿಸಿರುತ್ತಾರೆ. ಅಂಥ ಎಲ್ಲಾ ಜನರಿಗೂ ಈ ಸಿನಿಮಾ ಮನ ಮುಟ್ಟುತ್ತದೆ. ಬಹು ಸಮಯದ ನಂತರ ನಾನು ಈ ಸಿನಿಮಾದಲ್ಲಿ ಹಳ್ಳಿಯ ಜನಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆಹಾರ ಭದ್ರತೆಯ ಮೇಲೆ ಮಾಡಿರುವ ಈ ಸಿನಿಮಾದಲ್ಲಿ ಒಂದು ಸಂದೇಶವಿದೆ’ ಎಂದರು

ಈ ಹಿಂದೆ ‘ತಾಯವ್ವ’ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ ಪವನ ಕುಮಾರ್, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ತೇಜು ಮೂರ್ತಿ ಮತ್ತು ಎಸ್.ಪದ್ಮಾವತಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಬಿ.ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.

Tags:
error: Content is protected !!