ನಾಯಿ ಮತ್ತು ಅದರ ಮಾಲೀಕನ ನಡುವಿನ ಅವಿನಾಭಾವ ಸಂಬಂಧದ ಕಥೆಯಿದ್ದ ಚಿತ್ರ ‘ನಾನು ಮತ್ತು ಗುಂಡ’ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಶಿವರಾಜ್ ಕೆ.ಆರ್.ಪೇಟೆ ನಾಯಕನಾಗಿ ನಟಿಸಿದ ಆ ಚಿತ್ರವನ್ನು ರಘು ಹಾಸನ್ ನಿರ್ಮಿಸಿದ್ದರು. ಈಗ ರಘು, ‘ನಾನು ಮತ್ತು ಗುಂಡ’ ಚಿತ್ರದ ಮುಂದುವರೆದ ಭಾಗವಾದ ‘ನಾನು ಮತ್ತು ಗುಂಡ 2’ ಚಿತ್ರ ನಿರ್ಮಿಸಿ-ನಿರ್ದೇಶಿಸಿದ್ದು, ಆ ಚಿತ್ರವೀಗ ಸೆಪ್ಟೆಂಬರ್ 5ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅದಕ್ಕೂ ಮೊದಲು ಚಿತ್ರಕ್ಕಾಗಿ ಡಾ.ವಿ. ನಾಗೇಂದ್ರ ಪ್ರಸಾದ್ ರಚಿಸಿ, ವಿಜಯಪ್ರಕಾಶ್ ಹಾಡಿರುವ ‘ಓಂ ಶಿವಾಯ, ನಮೋ ಶಿವಾಯ…’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಾಕೇಶ್ ಆಡಿಗ ಮತ್ತು ರಚನಾ ಇಂದರ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆರ್.ಪಿ. ಪಟ್ನಾಯಕ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ರಘು ಹಾಸನ್, ‘ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕೆಂದಾಗ ಹುಟ್ಟಿದ್ದೇ ಗುಂಡನ ಕಥೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ ‘ಯು/ಎ’ ಕೊಟ್ಟಿದೆ. ಮೊದಲ ಚಿತ್ರದಲ್ಲಿ ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಮುಂದುರೆಯುತ್ತದೆ. ರಾಕೇಶ್ ಅಡಿಗ, ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸಾಮಾಜಿಕ ಕಳಕಳಿ ಜೊತೆಗೆ ದೈವಿಕ ಅಂಶಗಳಿರುವ ಈ ಚಿತ್ರಕ್ಕೆ ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ’ ಎಂದರು.
‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಆರ್.ಪಿ. ಪಟ್ನಾಯಕ್ ಸಂಗೀತ ಸಂಯೋಜಿಸಿದ್ದು, ತನ್ವಿಕ್ ಛಾಯಾಗ್ರಹಣ ಮಾಡಿದ್ದಾರೆ.





