ಕೊನೆಗೂ ಊಹಾಪೋಹಗಳು ನಿಜವಾಗಿವೆ. ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ರಚಿತಾ ರಾಮ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ವರ್ಷವೇ ಕೇಳಿಬಂದಿತ್ತು. ಆದರೆ, ಚಿತ್ರತಂಡದವರಾಗಲೀ, ರಚಿತಾ ಆಗಲೀ ಈ ವಿಷಯವನ್ನು ಸ್ಪಷ್ಟಪಡಿಸಿರಲಿಲ್ಲ. ಆ ಸುದ್ದಿ ನಿಜವಾಗಿದ್ದು, ‘ಕೂಲಿ’ ಚಿತ್ರದಲ್ಲಿ ರಚಿತಾ ರಾಮ್ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ಕೂಲಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದೆ. ಈ ಸಮಾರಂಭದಲ್ಲಿ ರಜನಿಕಾಂತ್, ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಎಲ್ಲ ಗಣ್ಯರ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಟ್ರೇಲರ್‌ನಲ್ಲಿ ರಚಿತಾ ರಾಮ್ ಅವರನ್ನು ಸಹ ನೋಡಬಹುದು.
ಚಿತ್ರದಲ್ಲಿ ರಚಿತಾ ರಾಮ್ ಪಾತ್ರವೇನು? ಅವರು ಎಷ್ಟು ಹೊತ್ತು ಇರುತ್ತಾರೆ? ಮುಂತಾದ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಆ ಎಲ್ಲಾ ಪ್ರಶ್ನೆಗಳಿಗೂ ಚಿತ್ರದಲ್ಲೇ ಉತ್ತರ ಕಂಡುಕೊಳ್ಳಬೇಕು. ಸದ್ಯ, ಟ್ರೇಲರ್‌ನಲ್ಲಿ ರಚಿತಾ ಅವರನ್ನು ನೋಡಬಹುದಾಗಿದ್ದು, ಈ ಮೂಲಕ ಅವರು ನಟಿಸಿರುವುದು ಖಾತ್ರಿಯಾಗಿದೆ.
ರಚಿತಾ ಈ ಹಿಂದೆ ‘ಸೂಪರ್ ಮಚ್ಚಿ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಚಿರಂಜೀವಿ ಅವರ ಮಾಜಿ ಅಳಿಯ ಕಲ್ಯಾಣ್ ದೇವ್‍ಗೆ ನಾಯಕಿಯಾಗಿ ನಟಿಸಿದ್ದರು. ಆದರೆ, ಚಿತ್ರ ಸೋತು, ರಚಿತಾ ನಿರೀಕ್ಷೆ ನುಚ್ಚುನೂರಾಯಿತು. ಈಗ ಅವರು ತಮಿಳು ಚಿತ್ರದಲ್ಲಿ, ಅದರಲ್ಲೂ ರಜನಿಕಾಂತ್ ಅಭಿನಯದ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಾದರೂ ಅವರು ಗಮನಸೆಳೆಯುತ್ತಾರಾ ಎಂಬುದನ್ನು ಕಾದು ನೋಡಬೇಕು.
‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಮತ್ತು ಉಪೇಂದ್ರ ಜೊತೆಗೆ ಶ್ರುತಿ ಹಾಸನ್, ಸತ್ಯರಾಜ್, ಆಮೀರ್ ಖಾನ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಲೋಕೇಶ್ ಕನಕರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಚಿತ್ರವು ಆಗಸ್ಟ್ 14ರಂದು ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ.





