Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ಪುಷ್ಪ 2’ ಚಿತ್ರದ ಡಿಜಿಟಲ್‍ ಹಕ್ಕುಗಳು ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?

ಅಲ್ಲು ಅರ್ಜುನ್‍ ಅಭಿನಯದ ‘ಪುಷ್ಪ 2’ ಚಿತ್ರವು ಆಗಸ್ಟ್ 15ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣದಲ್ಲಾದ ವಿಳಂಬದಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈಗ ಚಿತ್ರವು ಡಿಸೆಂಬರ್‍ 06ಕ್ಕೆ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಚಿತ್ರತಂಡವು ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಮುಕ್ತಾಯವಾಗಲಿದೆ.

ಈ ಮಧ್ಯೆ, ‘ಪುಷ್ಪ 2’ ಚಿತ್ರದ ಕುರಿತು ಬಿಸಿಬಿಸಿ ಸುದ್ದಿಯೊಂದು ಬಂದಿದೆ. ಚಿತ್ರದ ವ್ಯಾಪಾರ ಶುರುವಾಗಿದ್ದು, ಸ್ಯಾಟಿಲೈಟ್‍, ಡಿಜಿಟಲ್‍, ಓವರ್‍ಸೀಸ್‍, ವಿತರಣೆ … ಹೀಗೆ ಹಲವು ಹಕ್ಕುಗಳನ್ನು ಕೊಳ್ಳುವುದಕ್ಕೆ ದೊಡ್ಡ ಪೈಪೋಟಿಯೇ ನಡೆದಿದೆಯಂತೆ. ಮೂಲಗಳ ಪ್ರಕಾರ, ಈ ಪೈಕಿ ಚಿತ್ರದ ಡಿಜಿಟಲ್‍ ಹಕ್ಕುಗಳು ದಾಖಲೆಯ 270 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂದು ಹೇಳಲಾಗಿದೆ. ನೆಟ್‍ಫ್ಲಿಕ್ಸ್ ಸಂಸ್ಥೆಯು ಚಿತ್ರದ ಅಷ್ಟೂ ಭಾಷೆಗಳ ಹಕ್ಕುಗಳನ್ನು ಕೊಂಡಿದೆ ಎಂದು ಹೇಳಲಾಗಿದೆ.

ಪ್ರಭಾಸ್‍ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರದ ಹಕ್ಕುಗಳು, ಇದುವರೆಗೂ ಅತೀ ಹೆಚ್ಚು ಬೆಲೆಗೆ ಮಾರಾಟವಾಗಿರುವ ಸುದ್ದಿ ಇದೆ. ಚಿತ್ರದ ಹಕ್ಕುಗಳನ್ನು ಒಟ್ಟಾರೆ 375 ಕೋಟಿ ರೂ.ಗಳಿಗೆ ಮಾರಾಟವಾಗಿದ್ದು, ಈ ಪೈಕಿ ಅಮೇಜಾನ್‍ ಪ್ರೈಮ್‍ ಸಂಸ್ಥೆಯು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಹಕ್ಕುಗಳನ್ನು 200 ಕೋಟಿ ರೂ.ಗಳಿಗೆ ಪಡೆದರೆ, ನೆಟ್‍ಫ್ಲಿಕ್ಸ್ ಸಂಸ್ಥೆಯು ಬರೀ ಹಿಂದಿ ಅವತರಣಿಕೆಯ ಹಕ್ಕುಗಳನ್ನು 175 ಕೋಟಿ ರೂ.ಗಳಿಗೆ ತನ್ನದಾಗಿಸಿಕೊಂಡಿತ್ತು.

‘ಪುಷ್ಪ – ದಿ ರೂಲ್‍’ ಚಿತ್ರವು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಪುಷ್ಪ – ದಿ ರೈಸ್‍’ ಚಿತ್ರದ ಮುಂದುವರೆದ ಭಾಗವಾಗಿದೆ. ಪುಷ್ಪರಾಜ್‍ ಎಂಬ ಗ್ಯಾಂಗ್‍ಸ್ಟರ್‍ ಜೀವನದಲ್ಲಿ ನಡೆಯುವ ಕಥೆ ಇರುವ ಈ ಚಿತ್ರದಲ್ಲಿ ಪುಷ್ಪರಾಜ್‍ ಆಗಿ ಅಲ್ಲು ಅರ್ಜುನ್‍ ನಟಿಸಿದ್ದಾರೆ. ಇನ್ನು, ಅವರಿಗೆ ನಾಯಕಿಯಾಗಿ ಕನ್ನಡದ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಮಿಕ್ಕಂತೆ ಧನಂಜಯ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಸೇರಿದಂತೆ ಹಲವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ಸುಕುಮಾರ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ರಾಕ್‍ಸ್ಟಾರ್‍’ ದೇವಿಶ್ರೀ ಪ್ರಸಾದ್‍ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

Tags: