ಪ್ಯಾನ್ ಇಂಡಿಯಾ ಮಾಡೋದಕ್ಕೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‍ಗಳ ಸಿನಿಮಾ ಕಡಿಮೆಯಾಗುತ್ತಿದೆ, ಇದರಿಂದ ಬಜೆಟ್ ಸಹ ಹೆಚ್ಚಾಗುತ್ತಿದೆ, ನಿರ್ಮಾಪಕರಿಗೆ ನಷ್ಟ ಜಾಸ್ತಿಯಾಗುತ್ತಿದೆ ಎಂಬ ಮಾತುಗಳು ಕನ್ನಡ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ಹಂಸಲೇಖ ಸಹ ಪ್ಯಾನ್ ಇಂಡಿಯಾ ಎಂಬ ಹುಚ್ಚಿನಿಂದಾಗಿ ಕನ್ನಡದ ಸ್ಟಾರ್‍ಗಳಿಗೆ ಕನ್ನಡದ ಬೇರುಗಳು ಕಟ್ ಆಗಿದೆ ಎಂದು ಹೇಳಿದ್ದರು.
ಈಗ ಪ್ಯಾನ್ ಇಂಡಿಯಾ ಸಿನಿಮಾದ ಕುರಿತು ಹಿರಿಯ ನಿರ್ಮಾಪಕ ಕೆ. ಮಂಜು ಸಹ ಮಾತನಾಡಿದ್ದಾರೆ. ‘ಪ್ಯಾನ್ ಇಂಡಿಯಾ ನಮ್ಮನ್ನು ಉದ್ಧಾರ ಮಾಡಲ್ಲ, ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಮಾಡುತ್ತಿದ್ದಾರೆ. ಅದನ್ನು ನಂಬಿಕೊಂಡು ಹಲವು ನಿರ್ಮಾಪಕರು ಹಾಳಾಗುತ್ತಿದ್ದಾರೆ. ‘ಕೆಜಿಎಫ್’ ಚಿತ್ರದ ನಂತರ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಕನಸು ಕಾಣುವುದು ತಪ್ಪಲ್ಲ. ಆದರೆ, ಎಲ್ಲ ಸಿನಿಮಾ ಪ್ಯಾನ್ ಇಂಡಿಯಾ ಆಗುವುದಿಲ್ಲ. ಯಾರನ್ನೋ ನಂಬಿಕೊಂಡು ಸಿನಿಮಾ ಮಾಡಬೇಡಿ, ಕನ್ನಡ ನಂಬಿಕೊಂಡು ಸಿನಿಮಾ ಮಾಡಿ ಎಂದಿದ್ದಾರೆ. ಪ್ಯಾನ್ ಇಂಡಿಯಾದಿಂದ ದುಡ್ಡು ಹುಟ್ಟುವುದಿಲ್ಲ ಎಂದಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾದಿಂದ ನಿರ್ಮಾಪಕರು ಹೈರಣಾಗಿದ್ದಾರೆ ಎನ್ನುವ ಮಂಜು, ‘ಕನ್ನಡದಲ್ಲಿ ಬಹಳಷ್ಟು ನಿರ್ದೇಶಕರು ಮಾತೆತ್ತಿದರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತೀನಿ ಎನ್ನುತ್ತಾರೆ. ಆದರೆ, ಅದಕ್ಕೆ ಬಜೆಟ್ ಹಾಕೋರು ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿಯೇ, ಬಹಳಷ್ಟು ನಿರ್ಮಾಪಕರು ಸಿನಿಮಾ ಮಾಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದಾರೆ ಎನ್ನುತ್ತಾರೆ ಮಂಜು.
ಅಂದಹಾಗೆ, ಕೆ. ಮಂಜು ಇದೆಲ್ಲಾ ಮಾತನಾಡಿದ್ದು ‘ಹಗ್ಗ’ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ. ಇದಾಗಿ ಎರಡೇ ದಿನಗಳ ನಂತರ ವಿನೋದ್ ದೊಂಡಾಳೆ ಆತ್ಮಹತ್ಯೆಯ ಸುದ್ದಿ ಬಂದಿದೆ. ವಿನೋದ್, ಎರಡು ವರ್ಷಗಳ ಹಿಂದೆ ಸತೀಶ್ ನೀನಾಸಂ ಅಭಿನಯದಲ್ಲಿ ‘ಅಶೋಕಾ ಬ್ಲೇಡ್’ ಎಂಬ ಚಿತ್ರವನ್ನು ಪ್ರಾರಂಭಿಸಿದ್ದರು. ಮೊದಲು ಕನ್ನಡ ಚಿತ್ರ ಎಂದು ಶುರುವಾದ ‘ಅಶೋಕಾ ಬ್ಲೇಡ್’, ಪ್ಯಾನ್ ಇಂಡಿಯಾ ಚಿತ್ರವಾಗಿ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಸುದ್ದಿಯಾಯ್ತು. ಹೀಗೆ ಚಿತ್ರ ದೊಡ್ಡದಾಗ, ಸಾಲವೂ ಹೆಚ್ಚಾಗಿ, ಅದನ್ನು ತೀರಿಸಲಾಗದೆ, ಚಿತ್ರವನ್ನೂ ಮುಗಿಸಲಾಗದೆ ವಿನೋದ್ ನೇಣಿಗೆ ಶರಣಾಗಿದ್ದು ದುರಂತ.