Mysore
32
scattered clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಗುರುವಿನ ಜೊತೆಗೆ ‘ಜಂಬೂ ಸರ್ಕಸ್’ಗೆ ಹೊರಟ ಪ್ರವೀಣ್‍ ತೇಜ್‍

ನಟ ಪ್ರವೀಣ್‍ ತೇಜ್‍ ಅವರನ್ನು ‘ಜಾಲಿ ಡೇಸ್‍’ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ಹಿರಿಯ ನಿರ್ದೇಶಕ ಎಂ.ಡಿ. ಶ್ರೀಧರ್‍. ಈಗ 15 ವರ್ಷಗಳ ನಂತರ ಪ್ರವೀಣ್ ತೇಜ್‍ ಅಭಿನಯದಲ್ಲಿ ಒಂದು ಚಿತ್ರ ಮಾಡಿದ್ದಾರೆ ಶ್ರೀಧರ್. ಹೆಸರು ‘ಜಾಲಿ ಡೇಸ್‍’.

ದರ್ಶನ್ ಅಭಿನಯದ ‘ಒಡೆಯ’ ನಂತರ ಎಂ.ಡಿ. ಶ್ರೀಧರ್‍ ನಿರ್ದೇಶನದ ಯಾವೊಂದು ಚಿತ್ರವೂ ಬಿಡುಗಡೆ ಆಗಿರಲಿಲ್ಲ. ಈಗ ಅವರು ಸದ್ದಿಲ್ಲದೆ ‘ಜಂಬೂ ಸರ್ಕಸ್‍’ ಎಂಬ ಚಿತ್ರ ಮಾಡಿ ಮುಗಿಸಿದ್ದಾರೆ. ಈ ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದ್ದು, ಅದಕ್ಕೂ ಮುನ್ನ ಇತ್ತೀಚೆಗೆ ಟೀಸರ್‍ ಬಿಡುಗಡೆ ಆಗಿದೆ.

ಮಹತಿ ಕಂಬೈನ್ಸ್ನಡಿ ಎಚ್.ಸಿ. ಸುರೇಶ್ ನಿರ್ಮಾಣ ಮಾಡಿರುವ ‘ಜಂಬೂ ಸವಾರಿ’ ಚಿತ್ರದದಲ್ಲಿ ಪ್ರವೀಣ್ ತೇಜ್‍ಗೆ ನಾಯಕಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. ಚಿತ್ರದಲ್ಲಿ ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್ ಮುಂತಾದವರು ನಟಿಸಿದ್ದಾರೆ.

‘ಜಂಬೂ ಸರ್ಕಸ್‍’ ಚಿತ್ರದ ಕುರಿತು ಮಾತನಾಡಿದ ಶ್ರೀಧರ್, ‘ಮದುವೆಯೊಂದರಲ್ಲಿ ಸುರೇಶ್ ಸಿಕ್ಕಿದ್ದರು. ಆಗ ಒಂದು ಲೈನ್ ಹೇಳಿ ನಮಗೊಂದು ಸಿನಿಮಾ ಮಾಡಿಕೋಡಿ ಎಂದರು. ಇದು ಗೆಳೆಯರಿಬ್ಬರ ಕಥೆ. ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ ಒಂದೇ ದಿನ ಮದುವೆ ಆಗುತ್ತಾರೆ. ಒಂದೇ ಏರಿಯಾದಲ್ಲಿ ಎದಿರು ಬದಿರು ಮನೆ ಮಾಡುತ್ತಾರೆ. ಕೊನೆಗೆ ಅವರಿಗೆ ಒಂದೇ ದಿನ ಮಕ್ಕಳೂ ಕೂಡ ಆಗುತ್ತವೆ. ಇವರ ಗೆಳೆತನ ಅವರ ಹೆಂಡತಿಯರಿಗೆ ಇಷ್ಟ ಇರಲ್ಲ. ಹಾಗಾಗಿ ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ವೈರಿಗಳಾಗಿ ಬೆಳೆದ ನಾಯಕ-ನಾಯಕಿ ಮುಂದೆ ಏನೆಲ್ಲಾ ಮಾಡುತ್ತಾರೆ, ಅವರಿಬ್ಬರ ನಡುವೆ ಏನೆಲ್ಲಾ ನಡೆಯುತ್ತದೆ ಎಂಬುದೇ ಈ ಚಿತ್ರದ ಕಥೆ. ಇದರಲ್ಲಿ ಮೂರು ಫೈಟ್ ಮತ್ತು ಮೂರು ಹಾಡುಗಳಿವೆ’ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ಹೆಚ್.ಸಿ. ಸುರೇಶ್ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ‘ಫ್ಯಾಮಿಲಿ ಸಿಮಿಮಾ ಮಾಡಬೇಕು ಎಂದುಕೊಂಡಾಗ ಈ‌ ಕಥೆ ರೆಡಿಯಾಯಿತು. ಒಂದು ತಂಡವಾಗಿ ಮಾಡಿದ ಸಿನಿಮಾ ಇದು. ನಿರ್ದೇಶಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಒಂದು ಒಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ’ ಎಂದರು.

‘ಜಾಲಿ ಡೇಸ್’ ಸಿನಿಮಾ ದಿನಗಳು ನೆನಪಿಗೆ ಬರುತ್ತಿದೆ ಎಂದು ಮಾತು ಪ್ರಾರಂಭಿಸಿದ ಪ್ರವೀಣ್‍ ತೇಜ್‍, ‘ನಾನು ಚಿತ್ರರಂಗಕ್ಕೆ ಬಂದು 15 ವರ್ಷ ಆಯ್ತು. ಈಗಲೂ ಭಯ ಇದೆ. ನನ್ನ ಮೊದಲ ಸಿನಿಮಾ ನಿರ್ದೇಶಕರಾದ ಶ್ರೀಧರ್‍ ಅವರ ಜೊತೆ ಮತ್ತೆ ಸಿನಿಮಾ ಮಾಡಿದ್ದು ವಿಶೇಷ. ಎರಡು ಕುಟುಂಬಗಳ ನಡುವಿನ ಕಥೆ ಈ ಚಿತ್ರದಲ್ಲಿದೆ’ ಎಂದರು.

ನಾಯಕಿ ಅಂಜಲಿ ಇದಕ್ಕೂ ಮೊದಲು ‘ಪದವಿಪೂರ್ವ’ ಚಿತ್ರಕ್ಕೆ ನಾಯಕಿಯಾಗಿದ್ದರು. ಈಗ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕೃಷ್ಣಕುಮಾರ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ವಾಸುಕಿ ವೈಭವ್‍ ಸಂಗೀತವಿದೆ.

Tags: