Mysore
18
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

‘ಲಾಫಿಂಗ್ ಬುದ್ಧ’ನಾಗಿ ಬಂದ್ರು ಪ್ರಮೋದ್‍ ಶೆಟ್ಟಿ …

‘ಲಾಫಿಂಗ್‍ ಬುದ್ಧ’, ‘ಕಾಶಿ ಯಾತ್ರೆ’, ‘ಶಭಾಷ್‍ ಬಡ್ಡಿಮಗ್ನೆ’, ‘ಜಲಂಧರ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಪ್ರಮೋದ್‍ ಶೆಟ್ಟಿ. ಆದರೆ, ಯಾವೊಂದು ಚಿತ್ರವೂ ಅದ್ಯಾಕೋ ಬಿಡುಗಡೆಯಾಗುತ್ತಿಲ್ಲ. ಈಗ ಕೊನೆಗೂ ಪ್ರಮೋದ್‍ ಮೊದಲು ನಟಿಸಿದ ‘ಲಾಫಿಂಗ್ ಬುದ್ಧ’ ಚಿತ್ರವು ಮೊದಲು ಬಿಡುಗಡೆಯಾಗುತ್ತಿದೆ.

ಹೌದು, ‘ಲಾಫಿಂಗ್‍ ಬುದ್ಧ’ ಚಿತ್ರವು ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರಕ್ಕಾಗಿ ಕೆ. ಕಲ್ಯಾಣ್‍ ಬರೆದಿರುವ ‘ಎಂಥಾ ಚಂದಾನೇ ಇವಳು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

‘ಲಾಫಿಂಗ್ ಬುದ್ಧ’ ಚಿತ್ರವನ್ನು ರಿಷಭ್‍ ಶೆಟ್ಟಿ ನಿರ್ಮಿಸುತ್ತಿದ್ದು, ‘ಹೀರೋ’ ನಿರ್ದೇಶಿಸಿದ್ದ ಭರತ್‍ ರಾಜ್ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಪ್ರಮೋದ್‍, ‘ಒಂದಿನ ಇದ್ದಕ್ಕಿದ್ದಂತೆ ರಿಷಭ್ ಮತ್ತು ಭರತ್‍ ರಾಜ್ ಕರೆಸಿಕೊಂಡು, ಈ ಚಿತ್ರಕ್ಕೆ ನೀನೇ ಹೀರೋ ಎಂದರು. ಯಾವ ನಂಬಿಕೆ ಮೇಲೆ ನನ್ನನ್ನು ಹೀರೋ ಮಾಡ್ತಿದ್ದೀರಾ ಎಂದು ಕೇಳಿದೆ. ಅದಕ್ಕೆ ರಿಷಭ್, ಕುಂದಾಪುರದ ಬೈಗಳುವನ್ನು ಸೇರಿಸಿ, ‘ನಿನಗಲ್ಲ ದುಡ್ಡು ಹಾಕ್ತಿರೋದು, ದುಡ್ಡು ಹಾಕ್ತಿರೋದು ಕಥೆಗೆ’ ಅಂದ. ಅದಾದ ಮೇಲೆ ತೂಕ ಏರಿಸಬೇಕಿತ್ತು. ಈ ಚಿತ್ರಕ್ಕಾಗಿ 30 ಕೆಜಿ ಏರಿಸಿಕೊಂಡು, ಕೊನೆಗೆ 23 ಕೆ.ಜಿ ಇಳಿಸಿದ್ದೇನೆ. ಪೊಲೀಸರ ಮೇಲೆ ತುಂಬಾ ಒತ್ತಡ ಇರುತ್ತದೆ. ಅದನ್ನೆಲ್ಲಾ ಬಿಟ್ಟು ಮನೆಗೆ ಹೋಗಬೇಕು. ಅದನ್ನೆಲ್ಲಾ ನೋಡಿದರೆ ಅವರ ಮೇಲೆ ಕನಿಕರ ಬರುತ್ತದೆ. ಹಾಗಾಗಿ, ಇದೊಂದು ಸವಾಲಿನ ಪಾತ್ರ ಅಂತನಿಸಿತು ಒಪ್ಪಿಕೊಂಡೆ’ ಎಂದರು ಪ್ರಮೋದ್ ‍ಶೆಟ್ಟಿ.

ಈ ಹಿಂದೆ ರಿಷಭ್‍ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರವನ್ನು ನಿರ್ದೇಶಿಸಿದ್ದ ಭರತ್‍ ರಾಜ್‍, ‘ಲಾಫಿಂಗ್‍ ಬುದ್ಧ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದಕ್ಕೂ ಮೊದಲು ಜನಪ್ರಿಯ ಸಾಹಿತಿ ಜೋಗಿ ಅವರ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಕಥೆಯನ್ನು ಚಿತ್ರ ಮಾಡಬೇಕು ಅಂದುಕೊಂಡಿದ್ದರಂತೆ. ‘ಆದರೆ, ಅದೊಂದು ಸ್ವಗತವಾಗಿತ್ತು. ಈ ಮಧ್ಯೆ, ಹಿಮಾಚಲ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಯೂಟ್ಯೂಬ್‍ನಲ್ಲಿ ನೋಡಿದೆ. ಪೊಲೀಸ್‍ ಪೇದೆಯೊಬ್ಬ ತನ್ನ ಎಸ್‍.ಪಿ ಬೈದರು ಎಂಬ ಕಾರಣಕ್ಕೆ ಅಳುತ್ತಿದ್ದ ಘಟನೆ ಅದಾಗಿತ್ತು. ಆಗ ಈ ಕಥೆ ಹುಟ್ಟಿತು. ಪೊಲೀಸರ ಕುರಿತು ಹಲವು ಚಿತ್ರಗಳು ಬಂದಿವೆ. ಆದರೆ, ಇದು ಅವರ ವೈಯಕ್ತಿಕ ವಿಚಾರದ ಕುರಿತಾದ ಚಿತ್ರ. ಗೋವರ್ಧನ್‍ ಎಂಬ ಹೆಡ್‍ ಕಾನ್‍ಸ್ಟಬಲ್‍ ಕುರಿತು ಚಿತ್ರ ಸಾಗುತ್ತದೆ. ಈ ಹಾಡಿನಿಂದ ಮೂರು ಜನರ ಬದುಕಿನಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎಂಬುದೇ ಚಿತ್ರದ ಕಥೆ’ ಎಂದರು.

‘ಲಾಫಿಂಗ್ ಬುದ್ಧ’ ಚಿತ್ರದಲ್ಲಿ ನಾಯಕಿಯಾಗಿ ‘ಗಂಟುಮೂಟೆ’ ಖ್ಯಾತಿಯ ತೇಜು ಬೆಳವಾಡಿ ನಟಿಸಿದ್ದಾರೆ. ದಿಗಂತ್‍ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಎಸ್‍.ಕೆ. ಉಮೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಷ್ಣು ವಿಜಯ್‍ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ರಿಷಭ್‍ ಶೆಟ್ಟಿ ಫಿಲಂಸ್‍ ಸಂಸ್ಥೆಯಡಿ ರಿಷಭ್‍ ಶೆಟ್ಟಿ ನಿರ್ಮಿಸಿದ್ದು, ಆಗಸ್ಟ್ 15ರಂದು ಟ್ರೇಲರ್‍ ಬಿಡುಗಡೆ ಆಗುತ್ತಿದೆ.

Tags:
error: Content is protected !!