ಬಾಲಿವುಡ್‍ನ ಜನಪ್ರಿಯ ನಟ ಪರೇಶ್ ರಾವಲ್ ವಿರುದ್ಧ ಅಕ್ಷಯ್ ಕುಮಾರ್ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಪರೇಶ್ ಮೇಲೆ ಕೇಸ್ ದಾಖಲಿಸಿರುವ ಅವರು 25 ಕೋಟಿ ರೂ. ಪರಿಹಾರ ಕೇಳಿದ್ದಾರೆ.
ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಒಟ್ಟಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಅವರ ನಟನೆಯ ‘ಮೋಹ್ರಾ’, ‘ಹೇರಾ ಫೇರಿ’, ‘ಓ ಮೈ ಗಾಡ್’ ಮುಂತಾದ ಚಿತ್ರಗಳು ಸಾಕಷ್ಟು ಯಶಸ್ವಿಯಾಗಿವೆ. ಅದರಲ್ಲೂ 2000ದಲ್ಲಿ ಬಿಡುಗಡೆಯಾದ ‘ಹೇರಾ ಫೇರಿ’ ಚಿತ್ರವು ದೊಡ್ಡ ಯಶಸ್ಸು ಕಂಡಿತ್ತು. ಅದರ ನಂತರ ಅದರ ಮುಂದಿನ ಭಾಗವೂ ಬಂದಿತ್ತು. ಕೆಲವು ತಿಂಗಳುಗಳ ಹಿಂದೆ ‘ಹೇರಾ ಫೇರಿ 3’ ಚಿತ್ರದ ಘೋಷಣೆಯೂ ಆಗಿತ್ತು. ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದ ಪರೇಶ್, ಈಗ ಚಿತ್ರತಂಡದಿಂದ ಹೊರನಡೆದಿದ್ದಾರೆ. ಇದರಿಂದ ಬೇಸರಗೊಂಡಿರುವ ಅಕ್ಷಯ್ ಕುಮಾರ್, ಪರೇಶ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
‘ಹೇರಾ ಫೇರಿ’ ಸರಣಿಯ ಮೊದಲೆರಡು ಚಿತ್ರಗಳನ್ನು ಫಿರೋಜ್ ನಡಿಯಾಡ್‍ವಾಲಾ ನಿರ್ಮಿಸಿದ್ದರು. ಅವರಿಂದ ಚಿತ್ರದ ಹಕ್ಕುಗಳನ್ನು ಪಡೆದ ಅಕ್ಷಯ್ ಕುಮರ್, ಈ ಚಿತ್ರವನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದರು. ಈ ಚಿತ್ರದಲ್ಲಿ ಪರೇಶ್ ರಾವಲ್ ತಮ್ಮ ಬಾಬು ರಾವ್ ಪಾತ್ರವನ್ನು ಮುಂದುವರೆಸಬೇಕಾಗಿತ್ತು. 11 ಲಕ್ಷ ಮುಂಗಡ ಪಡೆದಿದ್ದ ಪರೇಶ್ ರಾವಲ್, ಚಿತ್ರದ ಟೀಸರ್ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರಂತೆ. ಪೂರ್ಣಪ್ರಮಾಣದ ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಪರೇಶ್ ರಾವಲ್, ಚಿತ್ರದಿಂದ ಹಿಂದೆ ಸರಿದಿದ್ದಾರೆ. ತಾವು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.
ಪರೇಶ್ ರಾವಲ್ ಅವರ ಈ ನಡೆಯಿಂದ ನಷ್ಟವಾಗಿದೆ ಎಂದು ಆರೋಪಿಸಿ ಅಕ್ಷಯ್ ಕುಮಾರ್ ಒಡೆತನದ ನಿರ್ಮಾಣ ಸಂಸ್ಥೆಯು, 25 ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. ಒಂದು ವಾರದೊಳಗೆ ಅವರು 25 ಕೋಟಿ ರೂ.ಗಳನ್ನು ಡೆಪಾಸಿಟ್ ಇಡದಿದ್ದರೆ, ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವುದಾಗಿ ನಿರ್ಮಾಣ ಸಂಸ್ಥೆ ಹೇಳಿದೆ.
ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ನಿಜಕ್ಕೂ ಹೊರನಡೆದು, ಅಕ್ಷಯ್ ಕೇಳಿದ ಪರಿಹಾರವನ್ನು ಕೊಡತ್ತಾರಾ? ಎಂಬುದನ್ನು ಕಾದು ನೋಡಬೇಕು.





